ಅರಸೀಕೆರೆ ನಗರದ ಕಂದಾಯ ಭವನದಲ್ಲಿ ಆಯೋಜಿಸಿದ್ದ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್, ಬಾಬು ಜಗಜೀವನರಾಮ್ ಭಾವಚಿತ್ರಕ್ಕೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಪುಷ್ಪಾರ್ಚನೆ ಮಾಡಿದರು. ಸಂತೋಷ್ ಕುಮಾರ್ ಇತರರು ಇದ್ದರು.
ಅರಸೀಕೆರೆ: ಸಾಮಾಜಿಕ ಅಸಮಾನತೆ ತೊಲಗಿಸಲು ಶ್ರಮಿಸಿದ ಮಹನೀಯರ ಸ್ಮರಣೆ, ಅನುಕರಣೆ ಔಚಿತ್ಯಪೂರ್ಣ ಎಂದು ಕರ್ನಾಟಕ ಗೃಹಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ನಗರದ ಕಂದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸ್ವಾತಂತ್ರೃಕ್ಕಾಗಿ ಒಂದು ಕಡೆ ಬ್ರಿಟಿಷರ ವಿರುದ್ಧ ಹೋರಾಟ ನಡೆಯುತ್ತಿದ್ದರೆ, ಮತ್ತೊಂದೆಡೆ ಅಂಬೇಡ್ಕರ್ ಜಾತಿ, ಅಸ್ಪಶ್ಯತೆ ಮತ್ತು ಜೀತ ಪದ್ಧತಿ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ಪ್ರಾರಂಭಿಸಿದ್ದರು. ಇದರ ಫಲ ಶೋಷಿತ ವರ್ಗವು ಜಾಗೃತವಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ಕೈ ಜೋಡಿಸಲು ಸಂಕಲ್ಪ ಮಾಡಿತ್ತು. ಅಂಬೇಡ್ಕರ್ ಕಂಡಿದ್ದ ಸಮ ಸಮಾಜದ ಕನಸಿಗೆ ಪೂರಕವಾಗಿ ಸಂವಿಧಾನ ರಚಿಸಿ ಕೊಟ್ಟಿದ್ದು, ಇದನ್ನೇ ವಿಶ್ವವೇ ಮೆಚ್ಚಿಕೊಂಡಿದೆ ಎಂದು ತಿಳಿಸಿದರು.
ಡಾ.ಬಾಬು ಜಗಜೀವನರಾಮ್ ರೂಪಿಸಿದ ಹಸಿರು ಕ್ರಾಂತಿಯು ದೇಶದಲ್ಲಿ ಆಹಾರ ಸ್ವಾವಲಂಬನೆ ಸಾಧಿಸಲು ಪ್ರೇರಣೆ ನೀಡಿತು. ಈ ಇಬ್ಬರು ಮಹನೀಯರ ಅಪ್ರತಿಮ ಹೋರಾಟದಿಂದ ದೇಶದ ಹೊರಗೆ ಮತ್ತು ಒಳಗೆ ಭಾರತಕ್ಕೆ ವಿಶೇಷ ಸ್ಥಾನಮಾನ ಸಿಕ್ಕಿದೆ ಎಂದರು.
ತಹಸೀಲ್ದಾರ್ ಎಂ.ಜಿ ಸಂತೋಷ್‌ಕುಮಾರ್ ಪ್ರಾಸ್ತವಿಕವಾಗಿ ಮಾತ ನಾಡಿ, ಸಂವಿಧಾನ ಎಲ್ಲ ಸಮುದಾಯಗಳಿಗೆ, ವ್ಯಕ್ತಿಗಳಿಗೆ ಸಮಾನತೆ ನೀಡಿದೆ. ಧಾರ್ಮಿಕ, ಸಾಮಾಜಿಕ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಮಾನತೆಯಲ್ಲಿ ಮೀಸಲಾತಿ ಸಿಕ್ಕಿದೆ. ಹಸಿರು ಕ್ರಾಂತಿಯಿಂದ ದೇಶದಲ್ಲಿ ಆಹಾರ ಪದಾರ್ಥಗಳ ಕೊರತೆ ಇಲ್ಲದಾಗಿದೆ ಎಂದು ತಿಳಿಸಿದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್ ಮಾತನಾಡಿ, ಅಂಬೇಡ್ಕರ್ ಮತ್ತು ಬಾಬೂಜಿ ಇವರಿಬ್ಬರೂ ವಿಜಯ ರಥದ ಸಾರಥಿಗಳಾಗಿದ್ದಾರೆ ಎಂದರು.
ನಂತರ ಅಂಬೇಡ್ಕರ್ ಮತ್ತು ಜಗಜೀವನ್ ರಾಮ್ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸಲಾಯಿತು. ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ಜಸ್ಸಿಕಾ ಪಿಂಟೋರನ್ನು ಸನ್ಮಾನಿಸಲಾ ಯಿತು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರಶಿವ ಮೂರ್ತಿ, ಮೇಲ್ವಿಚಾರಕ ವೆಂಕಟೇಶ್ ಶೆಟ್ಟಿ, ತಾಪಂ ಇಒ ಗಂಗಣ್ಣ, ಬಿಇಒ ಮೋಹನ್ ಕುಮಾರ್, ಡಿವೈಎಸ್ಪಿ ಗೋಪಿ, ಪೌರಾಯುಕ್ತ ಕೃಷ್ಣಮೂರ್ತಿ, ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋ ಬಾಬು, ನಗರಸಭೆ ಮಾಜಿ ಸದಸ್ಯ ವೆಂಕಮುನಿ, ಮುಖಂಡರಾದ ವೆಂಕಟೇಶ್, ರಾಜ್ಯ ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಜಯಣ್ಣ, ಜಿಲ್ಲಾ ದಿಶಾ ಸಮಿತಿ ಸದಸ್ಯೆ ಮಂಜುಳಾ ಚಂದ್ರನಾಯ್ಕ, ತೋಟಗಾರಿಕೆ, ಕೃಷಿ ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.