ಅರಸೀಕೆರೆ ನಗರದ ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಹಿರಿಯ ನಾಗರಿಕರನ್ನು ಗೌರವಿಸಲಾಯಿತು. ಕೆ.ಎಂ.ಶಿವಲಿಂಗೇಗೌಡ, ಧರ್ಮಶೇಖರ್, ಲಕ್ಷ್ಮಣ್, ಜಾಜೂರು ಸಿದ್ದೇಶ್, ರಮೇಶ್ ಇತರರಿದ್ದರು. 
ಹಾಸನ

ಮಹನೀಯರ ತತ್ವ, ಆದರ್ಶ ಪಾಲನೆ ಅವಶ್ಯ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಕೆ.ಎಂ.ಶಿವಲಿಂಗೇಗೌಡ ಅಭಿಮತ
  • ಅಂಬಿಗರ ಚೌಡಯ್ಯ ಜಯಂತಿ
ಅರಸೀಕೆರೆ : ಸಮಾಜದ ಓರೆ, ಕೋರೆಗಳನ್ನು ತಿದ್ದುವಲ್ಲಿ ಹನ್ನೆರಡನೆಯ ಶತಮಾನದ ಶಿವಶರಣರ ಪಾತ್ರ ಹಿರಿದಾಗಿದೆ ಎಂದು ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ತಾಲೂಕು ಗಂಗಾಮತಸ್ಥರ, ನಿಜ ಶರಣ ಅಂಬಿಗರ ಚೌಡಯ್ಯ ಸಂಘ ಹಾಗೂ ಗಂಗಾ ಸೇನಾ ಸಹಕಾರ ಸಂಘದ ವತಿಯಿಂದ ನಗರದ ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಮಾತನಾಡಿದರು.
ಸತ್ಯವಾದಿ ಲೋಕ ವಿರೋಧಿ ಎನ್ನುವ ರೀತಿಯಲ್ಲಿ ಶರಣರು ತಮ್ಮ ಕಾಯಕವಾದ ದೋಣಿ ನಡೆಸುತ್ತಲೇ ತಮ್ಮ ವಚನಗಳ ಮೂಲಕ ಅಂದಿನ ಸಮಾಜದ ಜಾತಿಯ ಸಂಘರ್ಷಗಳನ್ನು ತೊಡೆದು ಹಾಕಲು ಶ್ರಮಿಸಿದರು. 12ನೇ ಶತಮಾನದ ಬಸವಣ್ಣನವರ ಸಮಕಾಲಿನರಾದ ಅಂಬಿಗರ ಚೌಡಯ್ಯ ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಅಂತಹ ಮಹನೀಯರ ತತ್ವ, ಚಿಂತನೆ, ಆದರ್ಶ ಪಾಲಿಸಬೇಕಿದೆ ಎಂದರು.
ಸಮುದಾಯಗಳ ಬಲವರ್ಧನೆ, ಸಂಘಟನೆಗಾಗಿ, ಶುಭ ಸಮಾರಂಭಗಳು ಹಾಗೂ ಇನ್ನಿತರ ಕಾರ್ಯಕ್ರಮಗಳಿಗಾಗಿ ಎಲ್ಲ ಸಮಾಜಗಳಿಗೂ ಸಮುದಾಯ ಭವನಗಳನ್ನು ನಿರ್ಮಿಸಲಾಗಿದೆ. ನಾಲ್ಕು ಬಾರಿ ಶಾಸಕನಾಗಲು ಗಂಗಾಮತಸ್ಥ ಸಮಾಜವು ನನಗೆ ಸಂಪೂರ್ಣ ಸಹಕಾರ ನೀಡಿದ್ದು, ಸಮುದಾಯ ಭವನಕ್ಕೂ ನನ್ನ ಸಂಪೂರ್ಣ ಸಹಾಯ ಮಾಡಿದ್ದೇನೆ. ನಿಮ್ಮ ಮನವಿಯ ಮೇರೆಗೆ ಆಧುನೀಕರಣಕ್ಕಾಗಿ 25 ಲಕ್ಷ ರೂ. ಹಾಗೂ ಸಹಕಾರ ಬ್ಯಾಂಕಿಗೆ ಐದು ಲಕ್ಷ ರೂ. ಕೊಡುತ್ತೇನೆ. ಜತೆಗೆ ತಾಲೂಕು ಆಡಳಿತ ವತಿಯಿಂದ ಆಚರಿಸುವ ದಾರ್ಶನಿಕರ ಹಾಗೂ ಮಹನೀಯರ ಜಯಂತಿಗಳಿಗೆ ಇನ್ನು ಮುಂದೆ ವೈಯಕ್ತಿಕವಾಗಿ ಎರಡು ಲಕ್ಷ ರೂ. ನೀಡಲಾಗುವುದು ಎಂದರು.
ತಹಸೀಲ್ದಾರ್ ಸಂತೋಷ ಕುಮಾರ್, ತಾಲೂಕು ಗಂಗಾಮತಸ್ಥ ಸಂಘದ ಅಧ್ಯಕ್ಷ ಡಿ.ಲಕ್ಷ್ಮಣ್ ಮಾತನಾಡಿದರು. ಗಂಗಾಮತಸ್ಥ ಸಮಾಜದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕರಿಸುವ ಜತೆಗೆ 80 ವರ್ಷ ತುಂಬಿದ ಸಮಾಜದ ಹಿರಿಯರಿಗೆ ವೇದಿಕೆಯಲ್ಲಿ ಗೌರವಿಸಲಾಯಿತು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮ ಶೇಖರ್, ನಗರಸಭೆ ಮಾಜಿ ಅಧ್ಯಕ್ಷ ಎಂ.ಸಮಿವುಲ್ಲಾ, ಪೌರಾಯುಕ್ತ ಕೃಷ್ಣಮೂರ್ತಿ, ಕುರುಬ ಸಮಾಜದ ಅಧ್ಯಕ್ಷ ತೊಂಡಿಗನಹಳ್ಳಿ ಕೃಷ್ಣಮೂರ್ತಿ, ಮುಖಂಡರಾದ ಹರಪನಹಳ್ಳಿ ಜಯಣ್ಣ, ತಾಲೂಕು ಗಂಗಾಮತಸ್ಥ ಮಾಜಿ ಅಧ್ಯಕ್ಷ ಯಳವಾರೆ ಕೇಶವಮೂರ್ತಿ, ಯಳವಾರೆ ನಾಗರಾಜು, ಜಾಜೂರು ವೀರಭದ್ರಪ್ಪ, ಕರವೇ ತಾಲೂಕು ಅಧ್ಯಕ್ಷ ಕಿರಣ್ ಕುಮಾರ್, ತಾಲೂಕು ಗಂಗಾಮತಸ್ಥ ಕಾರ್ಯಕಾರಣಿ ಮಂಡಳಿಯ ಉಪಾಧ್ಯಕ್ಷ ರವಿಶಂಕರ್ ಹಾಗೂ ಸತೀಶ್ ಕಾರ್ಯದರ್ಶಿ ವೈ.ಡಿ.ಪುಟ್ಟಸ್ವಾಮಿ, ಖಜಾಂಚಿ ಜಾಜೂರು ಸಿದ್ದೇಶ್, ಸಹ ಕಾರ್ಯದರ್ಶಿ ಪುಟ್ಟಸ್ವಾಮಿ, ಸಂಘಟನಾ ಕಾರ್ಯದರ್ಶಿ ಸುಭಾಷ್ ಇತರರು ಇದ್ದರು.