ಅರಕಲಗೂಡಿನ ವಿಪ್ರ ಮಹಿಳಾ ಬಳಗದಿಂದ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಬೆಳಕು ವೃದ್ಧಾಶ್ರಮದ ಸಂಸ್ಥಾಪಕಿ ಕೆ.ಗೀತಾ ಅವರನ್ನು ಸನ್ಮಾನಿಸಲಾಯಿತು. ಶ್ವೇತಾ, ಅನುರಾಧಾ, ರುಕ್ಮಿಣಿ, ಪಿ.ಎಸ್.ಸುಧಾ, ಡಿ.ಟಿ.ಸವಿತಾ, ಗೀತಾ ಇದ್ದರು.
ಅರಕಲಗೂಡು: ಸಮಾಜದಲ್ಲಿ ಸ್ತ್ರೀಯರ ಸಾಧನೆ ಗಮನಾರ್ಹವಾಗಿದ್ದು ಉನ್ನತ ಮಟ್ಟದ ಸಾಧನೆ ಮಾಡುತ್ತಿರುವ ಮಹಿಳೆಯರ ಸಾಧನೆಯನ್ನು ಸಮಾಜ ಗೌರವಿಸಬೇಕು ಎಂದು ಹಾಸನ ಜಿಲ್ಲಾ ಬ್ರಾಹ್ಮಣ ಮಹಾಸಭಾ ನಿರ್ದೇಶಕಿ ಶ್ವೇತಾ ತಿಳಿಸಿದರು.
ಪಟ್ಟಣದ ಕೋಟೆ ಕೋದಂಡರಾಮ ಪ್ರವಚನ ಮಂದಿರಲ್ಲಿ ವಿಪ್ರ ಮಹಿಳಾ ಬಳಗದಿಂದ ಭಾನುವಾರ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಮತ್ತು ಮಹಿಳಾ ಬಳಗದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಉನ್ನತ ಸ್ಥಾನ ನೀಡಲಾಗಿದೆ. ರಾಮಾಯಣ, ಮಹಾಭಾರತದಲ್ಲಿ ಹೆಣ್ಣಿನ ಮಾನ ರಕ್ಷಣೆಗಾಗಿ ಯುದ್ಧಗಳು ನಡೆದಿವೆ. ಕುಟುಂಬ, ಸಮಾಜ ಎರಡನ್ನೂ ಸಮತೋಲನದಲ್ಲಿ ನಡೆಸುವ ಸಾಮರ್ಥ್ಯ ಮಹಿಳೆಯರಲ್ಲಿದೆ. ಸಮಾಜದಲ್ಲಿ ನಡೆಯುತ್ತಿರುವ ಅತ್ಯಾಚಾರ, ಅನ್ಯಾಯಗಳನ್ನು ತಡೆಯಲು ಗಂಡು ಮಕ್ಕಳಿಗೆ ಸಂಸ್ಕಾರ ನೀಡುವಲ್ಲಿ ಮಹಿಳೆಯರು ಇನ್ನಷ್ಟು ಜಾಗ್ರತೆ ವಹಿಸಬೇಕಿದೆ ಎಂದರು.
ಬೆಳಕು ವೃದ್ಧಾಶ್ರಮದ ಸಂಸ್ಥಾಪಕಿ ಕೆ.ಗೀತಾ ಮಾತನಾಡಿ, ಮಹಿಳೆಯರ ಸಾಧನೆ ಉನ್ನತವಾಗಿದ್ದರೂ ಹಲವು ಅಡೆತಡೆಗಳು ಅಡ್ಡಿಯನ್ನುಂಟು ಮಾಡುತ್ತಿವೆ. ಸಮಾಜ ಹಾಗೂ ಕುಟುಂಬದವರ ಬೆಂಬಲ ದೊರೆತಲ್ಲಿ ಇನ್ನೂ ಹೆಚ್ಚಿನ ಸಾಧನೆ ಸಾಧ್ಯವಾಗಲಿದೆ ಎಂದರು.
ಜೀವ ವಿಮಾ ಸಂಸ್ಥೆ ಪ್ರತಿನಿಧಿ ಅನುರಾಧಾ ಕಾರ್ಯಕ್ರಮ ಉದ್ಘಾಟಿಸಿದರು. ಮಹಿಳಾ ಬಳಗದ ಅಧ್ಯಕ್ಷೆ ರುಕ್ಮಿಣಿ, ಕಾರ್ಯದರ್ಶಿ ಪಿ.ಎಸ್.ಸುಧಾ, ಖಜಾಂಚಿ ಡಿ.ಟಿ.ಸವಿತಾ, ಗೀತಾ, ನಾಗಮಣಿ, ವತ್ಸಲಾ, ಲೀಲಾ, ಪದ್ಮಾ, ಜಿ.ಕೆ.ಉಮಾ, ಪದ್ಮಶ್ರೀ, ಪವಿತ್ರಾ, ಮಧುಶ್ರೀ, ಸರಸ್ವತಿ ಇತರರಿದ್ದರು. ಮಕ್ಕಳು ಮತ್ತು ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.