ಕೆಡಿಪಿ ಸದಸ್ಯ ನವೀನ್  
ಹಾಸನ

ಅಂಬೇಡ್ಕರ್, ಗಾಂಧೀಜಿ ಹಾರ ಹಾಕದೆ ಅವಮಾನ

ಬೇಲೂರು: ತಾಲೂಕಿನ ಹಗರೆ ಗ್ರಾಮ ಪಂಚಾಯಿತಿಯಲ್ಲಿ ಕೆಲ ನಾಯಕರ ಭಾವಚಿತ್ರಗಳಿಗೆ ಹೂವಿನ ಹಾರ ಹಾಕಿ, ರಾಷ್ಟ್ರೀಯ ನಾಯಕರಾದ ಡಾ.ಬಿ.ಆರ್.ಅಂಬೇಡ್ಕರ್, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಗಳಿಗೆ ಹಾರ ಹಾಕದೆ ಅವಮಾನಿಸಿರುವ ಪಿಡಿಒ ಶಶಿಕುಮಾರ್ ಅವರನ್ನು ಅಮಾನತುಪಡಿಸಬೇಕು ಎಂದು ತಾಲೂಕು ಕೆಡಿಪಿ ಸದಸ್ಯ ನವೀನ್ ಒತ್ತಾಯಿಸಿದರು.
ಹಗರೆ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ ಕಳೆದ ಜೂ.29ರಂದು ಆರ್‌ಟಿಐ ಮಾಹಿತಿ ಪಡೆಯಲು ಭೇಟಿ ನೀಡಿದ ವೇಳೆ ಕಚೇರಿಯಲ್ಲಿದ್ದ ಇತರ ನಾಯಕರ ಭಾವಚಿತ್ರಗಳಿಗೆ ಪುಷ್ಪಹಾರ ಹಾಕಲಾಗಿತ್ತು. ಆದರೆ ಡಾ.ಬಿ.ಆರ್.ಅಂಬೇಡ್ಕರ್-ಗಾಂಧೀಜಿ ಭಾವಚಿತ್ರಗಳಿಗೆ ಯಾವುದೇ ಹಾರ ಹಾಕದೆ ಕಡೆಗಣಿಸಲಾಗಿತ್ತು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಬಗ್ಗೆ ಪಿಡಿಒ ಶಶಿಕುಮಾರ್ ಅವರನ್ನು ಪ್ರಶ್ನಿಸಿದಾಗ, ಮುಂದಿನ ದಿನಗಳಲ್ಲಿ ಹೀಗಾಗದಂತೆ ಸರಿಪಡಿಸಲಾಗುವುದು ಎಂದಿದ್ದರು. ಮತ್ತೆ ಜುಲೈ 6ರಂದು ಕಚೇರಿಗೆ ಹೋಗಿ ನೋಡಿದಾಗ ಯಾವುದೇ ಬದಲಾವಣೆ ಕಾಣಿಸಲಿಲ್ಲ. ಕಚೇರಿಯಲ್ಲಿದ್ದ ಡಾ.ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪಹಾರ ಹಾಕದೆ ಬೇರೆ ಫೋಟೋಗಳಿಗೆ ಹೂಗಳನ್ನು ಇಡಲಾಗಿತ್ತು. ಇದನ್ನು ಪ್ರಶ್ನಿಸಿದಾಗ ಮುಂದೆ ತಂದು ಹಾಕಲಾಗುವುದು ಎಂದು ಉಡಾಫೆ ಉತ್ತರ ನೀಡಿದರು. ಸಂವಿಧಾನದಡಿ ಕೆಲಸ ಮಾಡುವ ಅಧಿಕಾರಿಗಳು ಸಂವಿಧಾನ ಶಿಲ್ಪಿ ಹಾಗೂ ರಾಷ್ಟ್ರಪಿತರಿಗೆ ಕನಿಷ್ಠ ಗೌರವ ನೀಡದಿರುವುದು ಖಂಡನೀಯ. ಜಿಲ್ಲಾಧಿಕಾರಿ, ಜಿಪಂ ಸಿಇಒ, ತಾಪಂ ಇಒ ಕೂಡಲೇ ಈ ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಎಸ್‌ಸಿ, ಎಸ್‌ಟಿ ಘಟಕದ ಜಿಲ್ಲಾ ಉಪಾಧ್ಯಕ್ಷ ಭೂಮೇಶ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಕನಿಷ್ಠ ಗೌರವ ನೀಡದಿರುವುದು ಅಧಿಕಾರಿಗಳ ಮಲತಾಯಿ ಧೋರಣೆ ತಿಳಿಯುತ್ತದೆ. ಕಚೇರಿಯಲ್ಲಿ ಇತರ ನಾಯಕರ ಭಾವಚಿತ್ರಗಳಿಗೆ ಹೂವಿನ ಹಾರ ಹಾಕಿದ್ದಾರೆ. ಆದರೆ ಅಂಬೇಡ್ಕರ್-ಗಾಂಧೀಜಿ ಭಾವಚಿತ್ರಗಳನ್ನು ಮಾತ್ರ ನಿರ್ಲರ್ಕ್ಷಿಸಿರುವುದು ಅವರ ಕೊಳಕು ಮನಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಹಗರೆ ಗ್ರಾಪಂ ಪಿಡಿಒ, ಸಿಬ್ಬಂದಿಯನ್ನು ಪ್ರಶ್ನಿಸಿದರೆ ‘ಹಾರ ಹಾಕಿಲ್ಲ ಅಂದ್ರೆ ಏನಾಗುತ್ತೆ‘ ಎಂಬ ಉಡಾಫೆಯಿಂದ ಉತ್ತರ ನೀಡುತ್ತಾರೆ. ಇದು ಸಾರ್ವಜನಿಕರ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ. ಈ ಪ್ರಕರಣವನ್ನು ಹಿರಿಯ ಅಅದಿಕಾರಿಗಳು ಗಂಭೀರವಾಗಿ ಪರಿಗಣಿಸಿ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಉಪಾಧ್ಯಕ್ಷ ನಯಾಜ್ ಅಹಮ್ಮದ್ ಇದ್ದರು.