ಅರಕಲಗೂಡು ಅನಕೃ ವೃತ್ತದಲ್ಲಿ ಗುರುವಾರ ವಿವಿಧ ಸಂಘಟನೆಗಳ ಕಾರ್ಯಕರ್ತರು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಲೀನಾ ಡಯಾಸ್, ಯಶೋದಾ, ಅಂಬಿಕಾ, ಲಿಂಗರಾಜು, ಚಂದ್ರು ಇತರರು ಇದ್ದರು.
- ಅಸಂಘಟಿತ ಕಾರ್ಮಿಕ ವಲಯದಿಂದ ಪ್ರತಿಭಟನೆ
ಅರಕಲಗೂಡು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಸಂಘಟಿತ ಕಾರ್ಮಿಕ ವಲಯದ ಸಂಘಟನೆಗಳ ಮುಖಂಡರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಕೋಟೆ ಕೊತ್ತಲು ಗಣಪತಿ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಅನಕೃ ವೃತ್ತದಲ್ಲಿ ಜಮಾಯಿಸಿ ಕೇಂದ್ರ ಸರ್ಕಾರ ಕಾರ್ಮಿಕರಿಗೆ ವಿರುದ್ಧ್ದವಾದ ನೀತಿ ರೂಪಿಸಿ ಕಿರುಕುಳ ನೀಡಲು ಹೊರಟಿದೆ ಎಂದು ಆರೋಪಿಸಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ಹೊರ ಹಾಕಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದುಡಿಯುವ ವರ್ಗದ ಕಾರ್ಮಿಕರ ಹಿತವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನಾಗಿ ರೂಪಿಸಿ ಅಂತಿಮ ಪ್ರಕಟಣೆ ಹೊರಡಿಸಿದೆ. ಈ ಸಂಹಿತೆಗಳು ಕಳೆದ 2019- 20ರಲ್ಲಿ ಲೋಕಸಭೆಯಲ್ಲಿ ಪಾಸಾಗಿದ್ದರೂ ದೇಶದ ಕಾರ್ಮಿಕ ವರ್ಗ ನಡೆದ ಐದು ಮುಷ್ಕರಗಳು ರೈತರ ಮತ್ತು ಪ್ರಜಾಸತ್ತಾತ್ಮಕ ಚಳವಳಿಗಳು ಜಾರಿಗೊಳಿಸಲು ಅವಕಾಶ ನೀಡಿರಲಿಲ್ಲ. ಕೇಂದ್ರ ಸರ್ಕಾರ ಕಾರ್ಪೋರೇಟ್ ಕಂಪನಿಗಳ ಮತ್ತು ಬಂಡವಾಳಗಾರರ ಪರವಾಗಿದ್ದು ಕಾರ್ಮಿಕ ವರ್ಗವನ್ನು ಕಡೆಗಣಿಸಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಅಕ್ಷರ ದಾಸೋಹ, ಅಂಗನವಾಡಿ ಕಾರ್ಯಕರ್ತರು ಹಾಗೂ ಗ್ರಾಪಂ ನೌಕರರ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಎಐಟಿಯು ರಾಜ್ಯ ಸಮಿತಿಯ ಲೀನಾ ಡಯಾಸ್, ಅಕ್ಷರ ದಾಸೋಹ ಸಂಘದ ಯಶೋದಾ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಂಬಿಕಾ, ಸಿಐಟಿಯು ಲಿಂಗರಾಜು, ಗ್ರಾಪಂ ನೌಕರರ ಸಂಘದ ಚಂದ್ರು, ಅಶೋಕ, ಕರ್ನಾಟಕ ಮುನ್ಸಿಪಲ್ ನೌಕರರ ಸಂಘದ ಸುಬ್ರಹ್ಮಣ್ಯ ಇತರರು ಇದ್ದರು.