ಬೇಲೂರು ಪಟ್ಟಣ ಸಮೀಪದ ಹೊಯ್ಸಳ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಶಾಸಕ ಎಚ್.ಕೆ.ಸುರೇಶ್, ಕ್ರೀಡಾಪಟುಗಳು ಹಾಗೂ ಅಧಿಕಾರಿಗಳೊಂದಿಗೆ ಕ್ರೀಡಾಂಗಣದ ಸ್ಥಳ ಪರಿಶೀಲಿಸಿ ಮಾಹಿತಿ ಪಡೆದರು. ಪ್ರಸನ್ನ, ಸಂತೋಷ್, ಮಂಜುನಾಥ್, ಶ್ರೀನಿವಾಸ್, ವಿನಯ್ ಇತರರಿದ್ದರು.
ಸ್ಥಳ ಪರಿಶೀಲಿಸಿದ ಶಾಸಕ ಎಚ್.ಕೆ.ಸುರೇಶ್ ಭರವಸೆ
ಬೇಲೂರು: ಪಟ್ಟಣದ ಸಮೀಪದ ಹೊಯ್ಸಳ ಕ್ರೀಡಾಂಗಣದ ಅವ್ಯವಸ್ಥೆ ಹಾಗೂ ಮೂಲಸೌಕರ್ಯದ ಕೊರತೆ ಬಗ್ಗೆ ಕ್ರೀಡಾಪಟುಗಳು, ವಾಯು ವಿಹಾರಿಗಳ ದೂರು ಆಧರಿಸಿ ಸೋಮವಾರ ಶಾಸಕ ಎಚ್.ಕೆ.ಸುರೇಶ್, ಕ್ರೀಡಾಂಗಣಕ್ಕೆ ಭೇಟಿ ನೀಡಿ ಕ್ರೀಡಾಪಟುಗಳು ಎದುರಿಸುತ್ತಿರುವ ಸಮಸ್ಯೆ ಹಾಗೂ ಓಡುವ ಟ್ರ್ಯಾಕ್, ಮೈದಾನ, ಪ್ರೇಕ್ಷಕರ ಆಸನ ವ್ಯವಸ್ಥೆ, ಕುಡಿಯುವ ನೀರು, ಶೌಚಗೃಹ ಸೇರಿದಂತೆ ವಿವಿಧ ಮೂಲಸೌಕರ್ಯಗಳ ಬಗ್ಗೆ ಪರಿಶೀಲಿಸಿದರು.
ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಕ್ರೀಡೆ ಮನುಷ್ಯನ ಆರೋಗ್ಯ ಕಾಪಾಡುವುದಲ್ಲದೆ, ದೈಹಿಕ ಹಾಗೂ ಮಾನಸಿಕ ಒತ್ತಡಗಳನ್ನು ನಿವಾರಿಸುತ್ತದೆ. ಆದ್ದರಿಂದ ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ತಾಲೂಕಿನಲ್ಲಿ ಸಾಕಷ್ಟು ಪ್ರತಿಭಾವಂತ ಕ್ರೀಡಾಪಟುಗಳಿದ್ದಾರೆ. ಅವರಿಗೆ ತರಬೇತಿ ಪಡೆಯಲು ಅಗತ್ಯ ಸೌಲಭ್ಯಗಳು ಬೇಕು. ಕ್ರೀಡಾಂಗಣದ ಅಭಿವೃದ್ಧಿಗೆ ಸರ್ಕಾರದಿಂದ ವಿಶೇಷ ಅನುದಾನ ತಂದು, ಆಧುನಿಕ ಸೌಲಭ್ಯ ಕಲ್ಪಿಸುವ ಮೂಲಕ ಯುವಕರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕ್ರೀಡೆಗೆ ಉತ್ತೇಜನ ನೀಡುವುದು ನಮ್ಮ ಆದ್ಯತೆಯಾಗಿದೆ. ಹಲವು ವರ್ಷಗಳಿಂದ ಕ್ರೀಡಾಂಗಣ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಮಳೆಗಾಲದಲ್ಲಿ ಮೈದಾನ ಸಂಪೂರ್ಣ ಕೆಸರಿನಿಂದ ತುಂಬಿ ಅಭ್ಯಾಸ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಓಟದ ಟ್ರ್ಯಾಕ್ ಹಾಳಾಗಿರುವುದು, ಸಮರ್ಪಕ ಬೆಳಕಿನ ವ್ಯವಸ್ಥೆ ಇಲ್ಲದಿರುವುದು ಹಾಗೂ ನಿರ್ವಹಣೆ ಕೊರತೆಯಿಂದ ಕ್ರೀಡಾಪಟುಗಳು ತೊಂದರೆ ಅನುಭವಿಸುತಿದ್ದಾರೆ ಎಂಬುದನ್ನು ಅರಿತು ಸಂಬಂಧಪಟ್ಟ ಅಧಿಕಾರಿಗೆ ದೂರವಾಣಿ ಕರೆ ಮಾಡಿ ತಕ್ಷಣ ಸ್ಥಳ ಪರಿಶೀಲಿಸಿ ಕ್ರೀಡಾಂಗಣದಲ್ಲಿ ಅಗತ್ಯವಾಗಿ ಬೇಕಿರುವ ಕಾಮಗಾರಿಗಳ ಅಂದಾಜು ಪಟ್ಟಿ ಸಿದ್ಧಪಡಿಸುವಂತೆ ಸೂಚಿಸಿದ್ದೇನೆ ಎಂದರು.
ನಿರ್ಮಿತಿ ಕೇಂದ್ರದ ಪ್ರಸನ್ನ, ಗ್ರಾಪಂ ಪಿಡಿಒ ಸಂತೋಷ್, ಸ್ಥಳೀಯರಾದ ಮಂಜುನಾಥ್, ಶ್ರೀನಿವಾಸ್, ವಿನಯ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಕ್ರೀಡಾಪಟುಗಳಿದ್ದರು.