ಕುಶಾಲನಗರ ಬಡಾವಣೆಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಗ್ರಂಥಾಲಯದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಸ್ಮರಣಾ ದಿನ 
ಹಾಸನ

ಸಂವಿಧಾನ ದುರ್ಬಲ ವರ್ಗಗಳಿಗೆ ಶಕ್ತಿ ನೀಡುವ ಸಾಧನ

ಸಕಲೇಶಪುರ: ಸರ್ವಜನಾಂಗದ ಶಾಂತಿಯ ತೋಟವನ್ನು ನಾಶಪಡಿಸುತ್ತಿರುವುದು ಸಂಘಟನೆಗಳಲ್ಲ. ಆಳುವ ಸರ್ಕಾರಗಳೇ ಆಗಿವೆ. ಆದರೆ ನಾವು ಇನ್ನೂ ಇಂತಹ ಕೃತ್ಯಗಳಿಗೆ ಕಿಡಿಗೇಡಿ ಸಂಘಟನೆಗಳೇ ಕಾರಣ ಎಂಬ ಭ್ರಮೆಯಲ್ಲಿದ್ದೇವೆ ಎಂದು ವಕೀಲ ಅನಂತ್ ನಾಯಕ್ ಹೇಳಿದರು.
ಕುಶಾಲನಗರ ಬಡಾವಣೆಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಗ್ರಂಥಾಲಯದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಸ್ಮರಣಾ ದಿನದ ಅಂಗವಾಗಿ ಮಾನವ ಬಂಧುತ್ವ ವೇದಿಕೆ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಸಂವಿಧಾನ ಜಾಗೃತಿ ವಿಚಾರಗೋಷ್ಠಿಯಲ್ಲಿ ಸಂವಿಧಾನ ಸಂರಕ್ಷಣೆಯಲ್ಲಿ ಅಹಿಂದ ವರ್ಗಗಳ ಐಕ್ಯತೆಯ ಪಾತ್ರ ವಿಷಯ ಕುರಿತು ಮಾತನಾಡಿದರು. ದೇಶದ ಅಭಿವೃದ್ಧಿ ಕುಂಠಿತಗೊಳ್ಳಲು ಪಾಕಿಸ್ತಾನ, ಬಾಂಗ್ಲಾದೇಶ, ಚೀನಾ, ಅಮೆರಿಕ ಹಾಗೂ ಮುಸ್ಲಿಮರ ಮೇಲೆ ಆರೋಪ ಹೊರಿಸಿ ಪಲಾಯನವಾದ ಮಾಡಲಾಗುತ್ತಿದೆ. ಈ ಮೂಲಕ ಜನರ ಗಮನವನ್ನು ಬೇರೆಡೆಗೆ ತಿರುಗಿಸಿ, ಧರ್ಮದ ದ್ವೇಷವನ್ನು ಬೆಳೆಸಿ ಜನರನ್ನು ವಿಭಜಿಸಿ ಅಧಿಕಾರ ಹಿಡಿಯುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಅಹಿಂದ ವರ್ಗಗಳು ಒಗ್ಗಟ್ಟಾಗಿ ನಿಂತಾಗ ಮಾತ್ರ ಸಂವಿಧಾನಾತ್ಮಕ ಮೌಲ್ಯಗಳನ್ನು ರಕ್ಷಿಸಲು ಸಾಧ್ಯ. ಸಂವಿಧಾನವು ದುರ್ಬಲ ವರ್ಗಗಳಿಗೆ ಶಕ್ತಿ ನೀಡುವ ಮಹತ್ತರ ಸಾಧನವಾಗಿದೆ. ಅದನ್ನು ಅರಿತುಕೊಳ್ಳುವ ಜಾಗೃತಿ ಸಮಾಜದಲ್ಲಿ ಇನ್ನಷ್ಟು ಹೆಚ್ಚಾಗಬೇಕು ಎಂದರು.
ಅಹಿಂದ ಸಮುದಾಯ ಪ್ರೀತಿ ಮತ್ತು ವಿಶ್ವಾಸದಿಂದ ಒಂದಾಗಬೇಕು. ಸಂವಿಧಾನ ಉಳಿದರೆ ದೇಶ ಉಳಿಯುತ್ತದೆ. ಸಂವಿಧಾನ ಅಳಿದರೆ ದೇಶ ನಾಶವಾಗುತ್ತದೆ ಎಂದು ಹೇಳಿದರು.
ಉಪನ್ಯಾಸಕ ರೋಹಿತ್ ಅಗಸರವಳ್ಳಿ, ಪ್ರಸ್ತುತ ಪ್ರಜಾಪ್ರಭುತ್ವದ ಎದುರಿನ ಗಂಭೀರ ಸವಾಲುಗಳು ವಿಷಯ ಕುರಿತು ಉಪನ್ಯಾಸ ನೀಡಿದರು. ರಂಗಕರ್ಮಿ ರಕ್ಷಿದಿ ಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿದರು. ಕೆ.ಎಸ್.ಸತೀಶ್ ಕುಮಾರ್, ಮಂಜು, ಜಿಲ್ಲಾ ಸಂಚಾಲಕ ರಂಗಸ್ವಾಮಿ, ಜಾಮಿಯಾ ಮಸೀದಿ ಉಪಾಧ್ಯಕ್ಷ ಅಸ್ಲಂ ಪಾಷ, ಬದ್ರಿಯ ಮಸೀದಿ ಮಾಜಿ ಅಧ್ಯಕ್ಷ ಆದಂ ಹಾಜಿ, ಮೆಹಬೂಬ್, ಕಾಡಪ್ಪ ಉಪಸ್ಥಿತರಿದ್ದರು.