ಹಾಸನ ನಗರದ ಎವಿಕೆ ಕಾಲೇಜು ಸಭಾಂಗಣದಲ್ಲಿ ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಭಾನುವಾರ ಆಯೋಜಿಸಿದ್ದ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನವನ್ನು ಗಣ್ಯರು ಉದ್ಘಾಟಿಸಿದರು. ಡಾ.ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಲೀಲಾದೇವಿ ಆರ್.ಪ್ರಸಾದ್, ಶ್ರೇಯಸ್ ಎಂ.ಪಟೇಲ್, ಎಚ್.ಪಿ.ಸ್ವರೂಪ್, ಶಿವಾನಂದ ತಗಡೂರು, ರವಿ ನಾಕಲಗೂಡು, ಬಾ.ನಂ.ಲೋಕೇಶ್ ಇತರರಿದ್ದರು.
- ಜಗತ್ತಿಗೆ ಮಾನವೀಯ ಮೌಲ್ಯ ಸಾರಿದ ದೇಶ ಭಾರತ
- ಬೇಬಿ ಮಠ ಚಂದ್ರವನ ಆಶ್ರಮದ ಪೀಠಾಧಿಪತಿ ಡಾ.ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಅಭಿಮತ
ಹಾಸನ: ಭಾರತೀಯ ಸಂಸ್ಕೃತಿ ವಿಶ್ವದಲ್ಲೇ ಅತ್ಯಂತ ಪ್ರಾಚೀನ, ಶ್ರೀಮಂತ ಹಾಗೂ ಮೌಲ್ಯಾಧಾರಿತವಾಗಿದೆ ಎಂದು ಶ್ರೀರಂಗಪಟ್ಟಣದ ಬೇಬಿ ಮಠ ಚಂದ್ರವನ ಆಶ್ರಮದ ಪೀಠಾಧಿಪತಿ ಡಾ.ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಹೇಳಿದರು.
ನಗರದ ಎವಿಕೆ ಕಾಲೇಜು ಸಭಾಂಗಣದಲ್ಲಿ ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಭಾನುವಾರ ಆಯೋಜಿಸಿದ್ದ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ಮತ್ತು ಯುವಜನರು ಸಾಹಿತ್ಯದಿಂದ ದೂರವಾಗುತ್ತಿರುವುದು ಕಳವಳಕಾರಿ ಬೆಳವಣಿಗೆ. ತಾಯಿಯ ಋಣ, ಗುರುಗಳ ಗೌರವ, ಹಿರಿಯರ ಬಗ್ಗೆ ಆದರ, ಮಾನವೀಯತೆ ಮತ್ತು ನೈತಿಕ ಮೌಲ್ಯಗಳನ್ನು ಜಗತ್ತಿಗೆ ಸಾರಿದ ದೇಶ ಭಾರತ. ಇಂತಹ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ತಿಳಿಸಿದರು.
ಪುಸ್ತಕ ಓದುವ ಅಭ್ಯಾಸ ಹೆಚ್ಚಿದಷ್ಟೂ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ. ಚುಟುಕು ಸಾಹಿತ್ಯವು ಕಡಿಮೆ ಪದಗಳಲ್ಲಿ ಆಳವಾದ ಅರ್ಥ, ಬದುಕಿನ ಮೌಲ್ಯಗಳು ಹಾಗೂ ಸಾಮಾಜಿಕ ಸಂದೇಶಗಳನ್ನು ಪರಿಣಾಮಕಾರಿಯಾಗಿ ತಲುಪಿಸುವ ಶಕ್ತಿಯುಳ್ಳ ಸಾಹಿತ್ಯ ಪ್ರಕಾರವಾಗಿದೆ. ಆದ್ದರಿಂದ ಶಾಲಾ-ಕಾಲೇಜು ಹಂತದಿಂದಲೇ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದರು.
ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಮಾತನಾಡಿ, ಸಂಸ್ಕಾರವು ಬದುಕಿನ ಅವಿಭಾಜ್ಯ ಅಂಗವಾಗಿದೆ. ಅಧಿಕಾರ, ಹಣ, ವಿದ್ಯೆ ಅಥವಾ ಹುದ್ದೆಗಿಂತ ಮಾನವೀಯ ಮೌಲ್ಯಗಳು ಅತ್ಯಂತ ಶ್ರೇಷ್ಠವಾಗಿವೆ. ಉತ್ತಮ ಸಂಸ್ಕಾರವನ್ನು ಯಾವುದೇ ವಿಶ್ವವಿದ್ಯಾಲಯ ಕಲಿಸಲು ಸಾಧ್ಯವಿಲ್ಲ. ಅದು ಕುಟುಂಬ, ಸಮಾಜ ಮತ್ತು ಉತ್ತಮ ಸಾಹಿತ್ಯದ ಮೂಲಕವೇ ವ್ಯಕ್ತಿಯಲ್ಲಿ ಬೆಳೆಯುತ್ತದೆ. ಇಂದಿನ ಪೀಳಿಗೆ ಮಾನವೀಯತೆ, ಪರಸ್ಪರ ಗೌರವ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಮ್ಮೇಳನದ ಆರಂಭದಲ್ಲಿ ಧ್ವಜಾರೋಹಣ ನಡೆಯಿತು. ಸಂಸದ ಶ್ರೇಯಸ್ ಎಂ.ಪಟೇಲ್ ಹಾಗೂ ಶಾಸಕ ಎಚ್.ಪಿ.ಸ್ವರೂಪ್ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಸರ್ವಾಧ್ಯಕ್ಷ ಡಾ.ರತ್ನಾ ಹಾಲಪ್ಪಗೌಡ ಮಾತನಾಡಿ, ಚುಟುಕು ಸಾಹಿತ್ಯವು ಕನ್ನಡ ಸಾಹಿತ್ಯದ ವಿಶಿಷ್ಟ ಪ್ರಕಾರವಾಗಿದ್ದು, ಕಡಿಮೆ ಪದಗಳಲ್ಲಿ ಗಾಢವಾದ ಅರ್ಥವನ್ನು ನೀಡುವ ಶಕ್ತಿ ಹೊಂದಿದೆ. ಇಂತಹ ಸಾಹಿತ್ಯವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ರಂದು ತಿಳಿಸಿದರು.
ಯುವಜನರು ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಕನ್ನಡ ಭಾಷೆ, ನಾಡು-ನುಡಿ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಸಾಹಿತ್ಯ ಸಂಘಟನೆಗಳು ನಿರಂತರವಾಗಿ ಶ್ರಮಿಸುತ್ತಿದ್ದು, ಸಮಾಜದ ಎಲ್ಲ ವರ್ಗಗಳ ಸಹಕಾರ ಅಗತ್ಯವಾಗಿದೆ ಎಂದರು.
ಸಮ್ಮೇಳನದಲ್ಲಿ ಚುಟುಕು ಸಾಹಿತ್ಯದ ನಾಲ್ಕು ಕೃತಿಗಳನ್ನು ಗಣ್ಯರು ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರವಿ ನಾಕಲಗೂಡು, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಾ.ನಂ.ಲೋಕೇಶ್, ಗೌರವಾಧ್ಯಕ್ಷ ರಾಜೇಂದ್ರ ದೊಡ್ಡಮಗ್ಗೆ, ಪ್ರೊ.ಕೆ. ಲೋಲಾಕ್ಷಿ, ಡಾ.ವಿ.ಮಹೇಶ್, ಅಪ್ಪಣ್ಣ ಮೇಟಿಗೌಡ, ಆಕಾಶವಾಣಿ ನಿವೃತ್ತ ನಿರ್ದೇಶಕಿ ನಿರ್ಮಲಾ ಎಲಿಗಾರ್, ವೀರಶೈವ ಲಿಂಗಾಯತ ಮಹಾಸಭೆ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ನಾಯಕರಹಳ್ಳಿ ಮಂಜೇಗೌಡ, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಕೆ.ಎಸ್. ಮಂಜುಪಂಡಿತ್, ಡಾ.ಎಚ್.ವಿ.ಚೇತನಾ, ಪ್ರಭಾತ್ ಕುಮಾರ್ ಶೆಟ್ಟಿ, ಶೋಭಾ ನಾಯಕ್, ಪೂರ್ಣಿಮಾ ನಾಯಕ್, ಜಿ.ಮಲ್ಲೇಶ್, ವಿ.ಆರ್.ಗೀತಾ, ಎಚ್.ಬಿ.ಕುಮಾರ್, ಗೀರಿಜಾ ನಿರ್ವಾಣಿ, ಕೊಟ್ರೇಶ್ ಉಪ್ಪಾರ್, ಶೋಭಾಶೇಖರ್, ಧನ್ ಕುಮಾರ್ ಇತರರಿದ್ದರು.