ಹಾಸನ ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ದಿ ಆರ್ಟ್ ಆಂಡ್ ಸೈನ್ಸ್ ಆಫ್ ಫೋಟೋಗ್ರಫಿ ಒಂದು ದಿನದ ಕೌಶಲಾಭಿವೃದ್ಧಿ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು. ಎಚ್.ಆರ್.ನವೀನ್ ಕುಮಾರ್, ಡಿ.ಎಸ್.ರಾಜು, ಎಂ.ಕೆ.ಹರೀಶ್, ಸತ್ಯಮೂರ್ತಿ ಇತರರಿದ್ದರು.
- ತಂತ್ರಜ್ಞಾನ ಸದ್ಬಳಕೆಯಿಂದ ಕ್ರಿಯಾಶೀಲತೆ ಹೆಚ್ಚಳ
- ಹವ್ಯಾಸಿ ಛಾಯಾಗ್ರಾಹಕ ಎಚ್.ಆರ್.ನವೀನ್‌ಕುಮಾರ್ ಅಭಿಪ್ರಾಯ
ಹಾಸನ: ಜಗತ್ತನ್ನು ಗಮನಿಸುವ ಅರಿವು ನಮ್ಮನ್ನು ಹೊಸ ಆಲೋಚನೆ, ಹೊಸ ಚಿಂತನೆಗಳಿಗೆ ತೆರೆಯುತ್ತದೆ. ಛಾಯಾಗ್ರಾಹಕ ಸುತ್ತಲಿನ ವಿದ್ಯಮಾನಗಳನ್ನು ಅನುಭವಿಸಿ ಚಿತ್ರ ಸೆರೆ ಹಿಡಿದಾಗ ಮಾತ್ರ ನೈಜ ಮತ್ತು ವಸ್ತುನಿಷ್ಠ ವಿಚಾರ ತಲುಪಿಸಲು ಸಾಧ್ಯ ಎಂದು ಹವ್ಯಾಸಿ ಛಾಯಾಗ್ರಾಹಕ ಎಚ್.ಆರ್.ನವೀನ್‌ಕುಮಾರ್ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ ದಿ ಆರ್ಟ್ ಆ್ಯಂಡ್ ಸೈನ್ಸ್ ಆಫ್ ಫೋಟೋಗ್ರಫಿ ಒಂದು ದಿನದ ಕೌಶಲಾಭಿವೃದ್ಧಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ತಂತ್ರಜ್ಞಾನವನ್ನು ಕಲಾತ್ಮಕ ರೀತಿಯಲ್ಲಿ ದುಡಿಸಿಕೊಳ್ಳುವುದರಿಂದ ಹೆಚ್ಚೆಚ್ಚು ಕ್ರಿಯಾಶೀಲರಾಗುತ್ತೇವೆ. ತೆರೆದ ಅವಕಾಶಗಳು ನಮ್ಮ ವಿಶ್ವಾಸವನ್ನು ಹೆಚ್ಚಿಸುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಿ.ಎಸ್.ರಾಜು ಮಾತನಾಡಿ, ಪತ್ರಕರ್ತರು ಪ್ರಚಲಿತ ವಿದ್ಯಮಾನಗಳ ನಿರ್ವಾಹಕರು. ಜಗತ್ತಿನಾದ್ಯಂತ ಕ್ಷಣ ಕ್ಷಣ ಮಾಹಿತಿಗಳನ್ನು ವಿವರಿಸುವ ಹಂತದಲ್ಲಿ ಛಾಯಾಚಿತ್ರ ಪತ್ರಕರ್ತರ ಪಾತ್ರ ದೊಡ್ಡದಿದೆ. ವಿದ್ಯಾರ್ಥಿ ದೆಸೆಯಲ್ಲಿಯೇ ಕೌಶಲ ಕಾರ್ಯಾಗಾರಗಳ ಮೂಲಕ ನೈತಿಕತೆ ಮತ್ತು ಸೃಜನಶೀಲತೆ ಕಲಿಸುವ ಕೆಲಸವಾಗಬೇಕು ಎಂದರು.
ಕಾಲೇಜಿನ ಶೈಕ್ಷಣಿಕ ಡೀನ್ ಎಂ.ಕೆ.ಹರೀಶ್ ಮಾತನಾಡಿ, ಸಮಾಜವನ್ನು ಸೂಕ್ಷ್ಮವಾಗಿ ಗ್ರಹಿಸುವ ಶಕ್ತಿ ಉತ್ತಮ ಪತ್ರಿಕೋದ್ಯಮಿಯನ್ನು ರೂಪಿಸುತ್ತದೆ. ಮಾನವೀಯತೆ ಮತ್ತು ಪ್ರೇರಣೆಯಿಂದ ಉಂಟಾದ ಅಕ್ಷರ ಮತ್ತು ಚಿತ್ರಗಳು ಉತ್ತಮ ಸಮಾಜವನ್ನು ಕಟ್ಟಿಕೊಡುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳು ಆ ನಿಟ್ಟಿನಲ್ಲಿ ತಯಾರಾಗಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಇಳಿಯುವಂತಾಗಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಭಾಗದ ಮುಖ್ಯಸ್ಥರಾದ ಡಾ.ಪ್ರಮೀಳಾ ಶೈಕ್ಷಣಿಕ ಜ್ಞಾನವನ್ನು ಸಮರ್ಪಕವಾಗಿ ಬದುಕಿಗೆ ಅನ್ವಯಿಸಲು ಕೌಶಲ ಅಗತ್ಯ. ಅದರಲ್ಲೂ ಪತ್ರಿಕೋದ್ಯಮವು ಸೃಜನಶೀಲತೆಯನ್ನು ನಿರೀಕ್ಷಿಸುವ ಕ್ಷೇತ್ರ. ಪ್ರಾಯೋಗಿಕ ಕಲಿಕೆಯಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಛಾಯಾಚಿತ್ರ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು, ಮುಂದಿನ ದಿನಗಳಲ್ಲೂ ಪ್ರಾಯೋಗಿಕ ಕಲಿಕೆಗೆ ಹೆಚ್ಚು ಒತ್ತು ಕೊಡಬೇಕಿದೆ ಎಂದರು.
ಪತ್ರಾಂಕಿತ ವ್ಯವಸ್ಥಾಪಕ ಸತ್ಯಮೂರ್ತಿ ಅವರು, ಸಮಾಜ ದಿಕ್ಕು ತಪ್ಪದಂತೆ ನಿರ್ವಹಿಸುವಲ್ಲಿ ಪತ್ರಿಕೋದ್ಯಮದ ಜವಾಬ್ದಾರಿ ಹೆಚ್ಚು. ಮುಖ್ಯವಾಗಿ ಛಾಯಾಚಿತ್ರ ಪತ್ರಿಕೋದ್ಯಮದಲ್ಲಿ ಅಂತಹ ಎಚ್ಚರಿಕೆಯ ಅಗತ್ಯವಿದೆ. ಕುಶಲತೆಯ ಜತೆಗೆ ನೈತಿಕತೆಯನ್ನು ಕಲಿಸುವ ಈ ಕಾರ್ಯಾಗಾರ ಅತ್ಯಂತ ಪ್ರಸ್ತುತವಾಗಿದೆ ಎಂದರು.
ಕಾರ್ಯಾಗಾರದಲ್ಲಿ ಪತ್ರಿಕೋದ್ಯಮ ವಿಭಾಗದ ಡಾ.ಭವ್ಯಾ, ಎನ್.ಜೆ.ಸಚಿನ್, ಎ.ಜಿ.ಸತೀಶ್ ಹಾಗೂ ಉಪನ್ಯಾಸಕರು ಇದ್ದರು.