ಹಾಸನದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಕೆ.ಎಸ್.ಲತಾಕುಮಾರಿ, ದಾಕ್ಷಾಯಿಣಿ, ಪ್ರಕಾಶ್, ಸೌರಭ್ ಕುಮಾರ್, ಗಿರೀಶ್, ಜೆ.ಆರ್.ಕೆಂಚೇಗೌಡ ಇತರರಿದ್ದರು. 
ಹಾಸನ

ನಿಯಮ ಉಲ್ಲಂಘನೆಯಿಂದ ಅಪಘಾತಗಳ ಹೆಚ್ಚಳ

ಪ್ರಮುಖ ಮುಖ್ಯಾಂಶಗಳು

  • ನಿಯಮ ಉಲ್ಲಂಘನೆಯಿಂದ ಅಪಘಾತಗಳ ಹೆಚ್ಚಳ
  • ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ ಕಳವಳ
  • ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ
ಹಾಸನ: ರಸ್ತೆ ನಿಯಮಗಳ ಉಲ್ಲಂಘನೆಯಿಂದ ಜಿಲ್ಲೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ರಸ್ತೆ ಅಪಘಾತದಲ್ಲಿ ರಾಜ್ಯದಲ್ಲಿ ಜಿಲ್ಲೆ 4 ನೇ ಸ್ಥಾನದಲ್ಲಿದೆ. ಹಾಗಾಗಿ ಪ್ರತಿಯೊಬ್ಬರೂ ಈ ಕುರಿತು ಹೆಚ್ಚಿನ ಜಾಗೃತಿ ವಹಿಸಬೇಕೆಂದು ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ ಹೇಳಿದರು.
ಜಿಲ್ಲಾಡಳಿತ ಹಾಗೂ ರಸ್ತೆ ಸುರಕ್ಷತಾ ಸಮಿತಿಯಿಂದ ರಸ್ತೆ ಸುರಕ್ಷೆ ಜೀವದ ರಕ್ಷೆ ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾನೂನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಾಗುತ್ತಿದೆಯಾದರೂ ಸಹ ಅಪಘಾತಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಸಾರ್ವಜನಿಕರು ಜವಾಬ್ದಾರಿಯುತವಾಗಿ ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದರು.
ದ್ವಿಚಕ್ರ ವಾಹನಗಳನ್ನು ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಕಾರು ಇತರ ವಾಹನಗಳನ್ನು ಚಲಾಯಿಸುವಾಗ ಸೀಟ್ ಬೆಲ್ಟ್ ಹಾಕುವುದರ ಜತೆಗೆ ವೇಗದ ಮಿತಿಯನ್ನು ನಿಯಂತ್ರಿಸಿಕೊಳ್ಳಬೇಕು ಎಂದ ಅವರು, ಜಿಲ್ಲೆಯಲ್ಲಿ 2024 ರಲ್ಲಿ 1208 ಅಪಘಾತಗಳು ಸಂಭವಿಸಿದ್ದು, 219 ಜನ ಮರಣ ಹೊಂದಿದ್ದಾರೆ. 2025 ರಲ್ಲಿ 1328 ಅಪಘಾತಗಳು ಸಂಭವಿಸಿ 260 ಜನರು ಮರಣ ಹೊಂದಿದ್ದಾರೆ. ಇಂತಹ ಪ್ರಕರಣಗಳಿಂದ ಎಷ್ಟೋ ಮಕ್ಕಳು ಅನಾಥರಾಗುತ್ತಿದ್ದಾರೆ ಮತ್ತು ಪಾಲಕರು ಮಕ್ಕಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದರು.
ಹೆಣ್ಣು ಮಕ್ಕಳಿಗೂ ಕೂಡ ಡ್ರೈವಿಂಗ್ ಕಲಿಸಬೇಕೆಂದು ಸಖಿ ಸಾವಿತ್ರಿ ಎಂಬ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಇದರ ಸದುಪಯೋಗವನ್ನು ಹೆಣ್ಣು ಮಕ್ಕಳು ಪಡೆದುಕೊಳ್ಳಬೇಕು ಎಂದರು.
ಪ್ರಧಾನ ಜಿಲ್ಲಾ ಮತ್ತು ಪ್ರಧಾನ ಸತ್ರ ನ್ಯಾಯಾಧೀಶರಾದ ರವಿಕುಮಾರ್ ಮಾತನಾಡಿ, ಪೊಲೀಸರ ಕರ್ತವ್ಯ ನಿರ್ವಹಣೆ ವಿಚಾರದಲ್ಲಿ ಜನಪ್ರತಿನಿಧಿಗಳು ಹಸ್ತಕ್ಷೇಪ ಮಾಡಬಾರದು. ಪ್ರತಿಯೊಬ್ಬರೂ ಪೊಲೀಸರಿಗೆ ಸಹಕಾರ ನೀಡಿದರೆ ಅಪರಾಧ ಪ್ರಕರಣಗಳು ಮತ್ತು ರಸ್ತೆ ಅಪಘಾತಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವಿಮೆ ಇಲ್ಲದೆ ಯಾವುದೇ ಕಾರಣಕ್ಕೂ ವಾಹನವನ್ನು ಚಲಾಯಿಸಬಾರದು. ಪರವಾನಗಿ ಇಲ್ಲದ ಮಕ್ಕಳಿಗೆ ವಾಹನಗಳು ನೀಡಬಾರದು. ವಾಹನ ಚಲಾಯಿಸಿ ಅಪಘಾತವಾದರೆ ವಾಹನ ಮಾಲೀಕರ ಮೇಲೆ ಕ್ರಮಕೈಗೊಳ್ಳಗುತ್ತದೆ ಎಂದು ತಿಳಿಸಿದರು.
ಹೆಲ್ಮೆಟ್ ಧರಿಸದೆ ಜಿಲ್ಲೆಯಲ್ಲೇ ಶೇ.80 ರಷ್ಟು ಜನ ವಾಹನ ಚಲಾಯಿಸುತ್ತಾರೆ. ಸಾರ್ವಜನಿಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ದಾಕ್ಷಾಯಿಣಿ ಮಾತನಾಡಿ, ಯುವ ಪೀಳಿಗೆ ಮೋಜುಮಸ್ತಿಗಾಗಿ ವೇಗವಾಗಿ ವಾಹನ ಚಾಲನೆ ಮಾಡುತ್ತಿದ್ದು, ಇದರಿಂದ ಅಮೂಲ್ಯ ಜೀವಗಳು ಬಲಿಯಾಗುತ್ತಿವೆ. ಅಪಘಾತವಾದ ಸ್ಥಳದಲ್ಲಿ ವಿಡಿಯೋ, ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಪ್ರವೃತ್ತಿಯನ್ನು ಮೊದಲು ನಿಲ್ಲಿಸಬೇಕು ಎಂದು ತಿಳಿಸಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಎಸ್‌ಆರ್‌ಟಿಸಿ, ಆಟೋ ಮತ್ತು ಟ್ಯಾಕ್ಸಿ ಕ್ಯಾಬ್ ಚಾಲಕರು, ಮಾಲೀಕರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಹಾಗೂ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸದಸ್ಯ ಕಾರ್ಯದರ್ಶಿ ಗಿರೀಶ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜೆ.ಆರ್. ಕೆಂಚೇಗೌಡ, ಹಿರಿಯ ಮೋಟಾರು ತಪಾಸಣಾಧಿಕಾರಿ ಯಶವಂತ್, ಎಸ್.ಎಸ್. ಪಾಷಾ ಇತರರಿದ್ದರು.