ಹಾಸನ ತಾಲೂಕಿನ ಕಟ್ಟಾಯ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಮಾಸ್ತಮ್ಮ ಹಾಗೂ ಪರಿವಾರ ದೇವರ ದೇವಸ್ಥಾನದ ಉದ್ಘಾಟನಾ ಮಹೋತ್ಸವವು ಇತ್ತೀಚೆಗೆ ಸಾಂಪ್ರದಾಯಿಕ ವಿಧಿವಿಧಾನಗಳ ಮೂಲಕ ನೆರವೇರಿತು. 
ಹಾಸನ

ಮಾಸ್ತಮ್ಮ ಪರಿವಾರ ದೇವರ ಉದ್ಘಾಟನೆ

ಪ್ರಮುಖ ಮುಖ್ಯಾಂಶಗಳು

  • ಮಾಸ್ತಮ್ಮ ಪರಿವಾರ ದೇವರ ಉದ್ಘಾಟನೆ
  • ಗಣಪತಿ, ಕಲಶ ಪೂಜೆ
  • ಅಪಾರ ಸಂಖ್ಯೆಯಲ್ಲಿ ಬಂದ ಭಕ್ತರು

ಹಾಸನ: ತಾಲೂಕಿನ ಕಟ್ಟಾಯ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಮಾಸ್ತಮ್ಮ ಹಾಗೂ ಪರಿವಾರ ದೇವರ ದೇವಸ್ಥಾನದ ಉದ್ಘಾಟನಾ ಮಹೋತ್ಸವವು ಇತ್ತೀಚೆಗೆ ಸಾಂಪ್ರದಾಯಿಕ ವಿಧಿ-ವಿಧಾನಗಳ ಮೂಲಕ ನೆರವೇರಿತು.

ಅರ್ಚಕ ಉದ್ದೂರು ಕಿರಣ್, ಮಲ್ಲಿಕಾರ್ಜುನ ತಂಡದ ನೇತೃತ್ವದಲ್ಲಿ ಗಣಪತಿ ಪೂಜೆ, ಕಲಶ ಸ್ಥಾಪನೆ, ವಿಶೇಷ ಪೂಜೆ, ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಭಕ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು.

ಮೊದಲ ದಿನ ಗ್ರಾಮದ ಮಹಿಳೆಯರು ಊರ ಮುಂಭಾಗದ ಕಾಟಿಕೆರೆಯಲ್ಲಿ ಕುಂಭಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಮಂಗಳವಾದ್ಯಗಳೊಂದಿಗೆ ಭವ್ಯ ಮೆರವಣಿಗೆಯಲ್ಲಿ ಕಳಸಗಳನ್ನು ಹೊತ್ತು ದೇವಸ್ಥಾನಕ್ಕೆ ಆಗಮಿಸಿದರು. ಸಂಜೆ ಮತ್ತು ರಾತ್ರಿ ಹೋಮ-ಹವನ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.
ಎರಡನೇ ದಿನ ಬೆಳಗ್ಗೆ ಶ್ರೀ ಮಾಸ್ತಮ್ಮ ಹಾಗೂ ಪರಿವಾರ ದೇವರಿಗೆ ಮಹಾಪೂಜೆ, ಹೋಮ-ಹವನ ಮತ್ತು ಪೂರ್ಣಾಹುತಿ ನೆರವೇರಿದ ಬಳಿಕ ನೂತನ ದೇವಸ್ಥಾನವನ್ನು ವಿಧಿವತ್ತಾಗಿ ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ದಾನಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಎರಡು ದಿನಗಳವರೆಗೆ ಆಗಮಿಸಿದ ಭಕ್ತರಿಗೆ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿ, ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು.