ಚನ್ನರಾಯಪಟ್ಟಣದ ಬಸ್ ನಿಲ್ದಾಣದ ಮುಂಭಾಗದ ಕುವೆಂಪು ಆಟೋ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಿರುವ ಛಾವಣಿ ಉದ್ಘಾಟನಾ ಸಮಾರಂಭದಲ್ಲಿ ಆಟೋ ಚಾಲಕರನ್ನು ಸನ್ಮಾನಿಸಲಾಯಿತು. ಸಿ.ಎನ್. ಬಾಲಕೃಷ್ಣ, ಸಿ.ಎನ್.ಮೋಹನ್, ರಂಗೇಗೌಡ, ಚಿಕ್ಕೇಗೌಡ ಇದ್ದರು. 
ಹಾಸನ

ಬಸ್ ತಂಗುದಾಣ ನಿರ್ಮಾಣ ಶೀಘ್ರ

ಲಲಾಟಾಕ್ಷ ಎಸ್
ಚನ್ನರಾಯಪಟ್ಟಣ: ಚನ್ನರಾಯಪಟ್ಟಣ ಬಸ್ ನಿಲ್ದಾಣದಲ್ಲಿ ಹಾಸನ ಮತ್ತು ಗ್ರಾಮಾಂತರ ಭಾಗದ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ತಂಗುದಾಣ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಭರವಸೆ ನೀಡಿದರು.
ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಕುವೆಂಪು ಆಟೋ ಚಾಲಕರ ಸಂಘದ ಆಟೋ ನಿಲ್ದಾಣದಲ್ಲಿ 2 ಲಕ್ಷ ರೂ.ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಛಾವಣಿ ಉದ್ಘಾಟಿಸಿ ಅವರು ಮಾತನಾಡಿದರು. ಪಟ್ಟಣದ ಘಟಕದಿಂದ ನಿತ್ಯ 100 ಬಸ್‌ಗಳು ಸಂಚರಿಸುತ್ತವೆ. ಅದೇ ರೀತಿ ಬೇರೆ ಜಿಲ್ಲೆಯಿಂದ ಚನ್ನರಾಯಪಟ್ಟಣದ ಬಸ್ ನಿಲ್ದಾಣದ ಮೂಲಕ ನೂರಾರು ಬಸ್‌ಗಳು ಸಂಚರಿಸುತ್ತವೆ. ಬಸ್ ನಿಲ್ದಾಣದಲ್ಲಿ ಹಾಸನದ ನಿಲುಗಡೆ ಜಾಗದಲ್ಲಿ ಪ್ರಯಾಣಿಕರು ಬಿಸಿಲಿನಲ್ಲಿ ಬಸ್‌ಗೆ ಕಾಯುವಂತಾಗಿದೆ. ಹಾಗಾಗಿ ಸ್ಥಳೀಯ ಶಾಸಕರ ಅನುದಾನದಲ್ಲಿ ಶೆಲ್ಟರ್ ನಿರ್ಮಿಸಲು 15 ದಿನದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.
ಬಸ್ ನಿಲ್ದಾಣದಲ್ಲಿ ಈಗಾಗಲೇ ಕುಡಿಯುವ ನೀರು ಸೌಕರ್ಯ, ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಪ್ರವೇಶ ದ್ವಾರದ ಬಲ ಭಾಗದಲ್ಲಿ ಹೈಮಾಸ್ಟ್ ದೀಪ ಅಳವಳಡಿಸಲಾಗಿದೆ. ಮುಂದಿನ ದಿನಗಳಲ್ಲಿ ಎಡಭಾಗದಲ್ಲೂ ಹೈಮಾಸ್ಟ್ ದೀಪ ಅಳವಡಿಸಲಾಗುವುದು. ಡಿಪೋ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಇದೇ ವೇಳೆ ಆಟೋ ಚಾಲಕರನ್ನು ಸನ್ಮಾನಿಸಲಾಯಿತು. ಪುರಸಭೆ ಮಾಜಿ ಅಧ್ಯಕ್ಷ ಸಿ.ಎನ್.ಮೋಹನ್, ಕುವೆಂಪು ಆಟೋ ಚಾಲಕರ ಸಂಘದ ಅಧ್ಯಕ್ಷ ರಂಗೇಗೌಡ, ತಾಲೂಕು ಆಟೋ ಚಾಲಕರ ಸಂಘದ ಉಪಾಧ್ಯಕ್ಷ ಚಿಕ್ಕೇಗೌಡ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎನ್.ರಾಜಣ್ಣ, ಜಾವಿದ್, ಪದಾಧಿಕಾರಿಗಳು ಭಾಗವಹಿಸಿದ್ದರು.