ಹೊಳೆ ನರಸಿಪುರ ತಾಲೂಕಿನ ಹಳ್ಳಿ ಮೈಸೂರಿನ ಸರ್ಕಾರಿ ಪ್ರಾಥಮಿಕ ಶಾಲೆ 125ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶ್ರೇಯಸ್ ಪಟೇಲ್, ರವಿಕುಮಾರ್, ದೇವರಾಜ್ ಇತರರು ಇದ್ದರು. 
ಹಾಸನ

ಸಾಧನೆ ಮಾಡುವ ಛಲ ಇದ್ದರೆ ಜೀವನದಲ್ಲಿ ಯಶ

ಪ್ರಮುಖ ಮುಖ್ಯಾಂಶಗಳು

  • ಸಂಸದ ಶ್ರೇಯಸ್ ಎಂ. ಪಟೇಲ್ ಅಭಿಮತ
ಹೊಳೆನರಸೀಪುರ: ಮನುಷ್ಯರಲ್ಲಿ ಸಾಧನೆ ಮಾಡುವ ಛಲ ಇದ್ದಾಗ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ಹೇಳಿದರು.
ತಾಲೂಕಿನ ಹಳ್ಳಿ ಮೈಸೂರು ಗ್ರಾಮದ ಪಿಎಂಶ್ರೀ ಸರ್ಕಾರಿ  ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ 125 ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಶಾಲೆಯ ಅಭಿವೃದ್ಧಿಗೆ ನನ್ನ ಸಹಕಾರ ಯಾವಾಗಲು ಇರುತ್ತದೆ. ಇದು ನನ್ನ ಊರು ನಾನು ಇದೇ ಹೋಬಳಿಯವನಾಗಿದ್ದು, ನನಗೆ ಶಾಲೆಯ ಮೇಲೆ ಹೆಚ್ಚಿನ ಪ್ರೀತಿ ಇದೆ.  ಶಾಲೆಗೆ ಕಂಪ್ಯೂಟರ್ ವ್ಯವಸ್ಥೆ, ಕೊಠಡಿಯ ವ್ಯವಸ್ಥೆ ಕಲ್ಪಿಸಲು ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ಸಾವಿರಾರು ಹಳೆಯ ವಿದ್ಯಾರ್ಥಿಗಳು ಸಾಧನೆ ಮಾಡಿ ದೇಶದ ಹಲವು ರಾಷ್ಟ್ರಗಳಲ್ಲಿ, ರಾಜ್ಯಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇದು ನಮ್ಮ ಶಾಲೆ ಹಾಗೂ ತಾಲೂಕಿಗೆ ಹೆಮ್ಮೆ ಎಂದರು.
ಡಾ.ರವಿಕುಮಾರ್ ಇದೇ ಶಾಲೆಯಲ್ಲಿ ಓದಿ ಸಮಾಜ ಸೇವೆ ಮಾಡಿ ಮುಖ್ಯಮಂತ್ರಿಗಳ ವೈದ್ಯಕೀಯ ಸಲಹೆಗಾರರಾಗಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿರುವುದು ಹೆಮ್ಮೆಯ ವಿಷಯ. ಹಳೆಯ ವಿದ್ಯಾರ್ಥಿಗಳು ಪಾಲಕರು ತಮ್ಮ ಮಕ್ಕಳಿಗೆ ಇಂತಹವರ ಸಾಧನೆಯನ್ನು ತಿಳಿಸಿಕೊಡಬೇಕು ಎಂದು ಸಲಹೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಜಿ.ಪಿ.ದೇವರಾಜ್ ಮಾತನಾಡಿ, ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಮಾತಿನಂತೆ ವಿದ್ಯಾರ್ಥಿಗಳು ಗುರುಗಳನ್ನು ಅನುಸರಿಸಿ ಅವರು ಹೇಳಿದ ಹಾಗೆ ಕಲಿತರೆ ಅದಕ್ಕಿಂತ ಸೌಭಾಗ್ಯ ಮತ್ತೊಂದಿಲ್ಲ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಗ್ರಾಮೀಣ ಪ್ರದೇಶವನ್ನು ಉಳಿಸಿ ಬೆಳೆಸಿದರೆ ಖಂಡಿತ ಭಾರತ ದೇಶ ಪ್ರಪಂಚದಲ್ಲಿ ಆರ್ಥಿಕತೆಯಲ್ಲಿ ಅಭಿವೃದ್ಧಿ ಹೊಂದುವುದರಲ್ಲಿ ಯಾವುದೇ ಸಂದೇಹವಿಲ್ಲ. ಈಗಾಗಲೇ ಭಾರತ ದೇಶ ವಿಶ್ವದಲ್ಲಿಯೇ ಆರ್ಥಿಕವಾಗಿ ಮುಂದುವರೆದು ನಾಲ್ಕನೇ ಸ್ಥಾನದಲ್ಲಿದೆ. ಸರ್ಕಾರದ ಹಲವು ಕಾರ್ಯಕ್ರಮಗಳಿಂದ ಯೋಜನೆಗಳಿಂದ ಜನರಿಗೆ ಅರಿವು ಮೂಡಿಸುವುದರ ಮೂಲಕ ಆರ್ಥಿಕವಾಗಿ ಸದೃಢಗೊಳಿಸಲು ನೆರವಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಸಿಎಂ ವೈದ್ಯಕೀಯ ಸಲಹೆಗಾರ ಡಾ.ರವಿಕುಮಾರ್, ನಿವೃತ್ತ ಪ್ರಾಂಶುಪಾಲ ಎಚ್.ಎಸ್.ಪುಟ್ಟಸೋಮಪ್ಪ, ಜಿ.ಪಂ. ಮಾಜಿ ಸದಸ್ಯ ಕುಮಾರ್, ಜೆಡಿಎಸ್ ಮುಖಂಡ ಹಾಗೂ ಉದ್ಯಮಿ ಆಲಗೌಡನಹಳ್ಳಿ ಸೋಮಶೇಖರ್, ಹಳ್ಳಿ ಮೈಸೂರು ಪೊಲೀಸ್ ಠಾಣೆಯ ಪಿಎಸ್‌ಐ ನವ್ಯಾ, ಉಪ ತಹಸೀಲ್ದಾರ್ ಶಿವಕುಮಾರ್, ಸಮಾಜಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೃಷ್ಣಮೂರ್ತಿ, ನಟೇಶ್, ಶಾಲೆಯ ಮುಖ್ಯ ಶಿಕ್ಷಕಿ ಮಿತ್ರದೇವಿ, ಸುಜಾತಾ ಅಲಿ, ದೈಹಿಕ ಪರಿವೀಕ್ಷಕ ಶಿಕ್ಷಕ ಪ್ರಸಾದ್, ಶಿವರಾಜ್, ನಾಗರಾಜ್   ಹಾಗೂ ಹಳೆಯ ವಿದ್ಯಾರ್ಥಿಗಳು ಇದ್ದರು.