ಚನ್ನರಾಯಪಟ್ಟಣದ ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆಯ ಜ್ಞಾನಸಾಗರ ಪರಂಪರ-2025 ಸಮಾರಂಭವನ್ನು ಪದ್ಮಶ್ರೀ ಪುರಸ್ಕೃತ, ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್.ಕಿರಣ್‌ಕುಮಾರ್ ಉದ್ಘಾಟಿಸಿದರು. ಡಾ.ಕೆ.ನಾಗೇಶ್, ಡಾ.ಭಾರತಿ ನಾಗೇಶ್, ಕೆ.ಎಸ್.ವಿಶ್ವಾಸ್, ಕೆ.ಎನ್.ಅನಿಲ್, ಸುಜಾ ಪಿಲಿಫ್, ಪಿಲಿಫ್ ಇದ್ದರು.
ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್.ಕಿರಣ್‌ಕುಮಾರ್ ಅಭಿಮತ
ಚನ್ನರಾಯಪಟ್ಟಣ: ಪ್ರಸ್ತುತ ಭಾರತ ವಿಶ್ವದಲ್ಲಿಯೇ ನಾಲ್ಕನೇ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಿದ್ದು ಸ್ವಾತಂತ್ರ್ಯ ಶತಮಾನೋತ್ಸವ ಸಂಭ್ರಮದ ವೇಳೆಗೆ ನಾವು ವಿಶ್ವದ ನಂಬರ್ ಒನ್ ಆರ್ಥಿಕ ರಾಷ್ಟ್ರವಾಗಿ ಬೆಳೆದು ನಿಲ್ಲಬೇಕಾಗಿದೆ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಚಿಂತಿಸಬೇಕಾಗಿದೆ ಎಂದು ಪದ್ಮಶ್ರೀ ಪುರಸ್ಕೃತ, ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್.ಕಿರಣ್‌ಕುಮಾರ್ ತಿಳಿಸಿದರು.
ಪಟ್ಟಣದ ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಶನಿವಾರ ಜ್ಞಾನ ಸಾಗರ ಅಂತಾರಾಷ್ಟ್ರೀಯ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಜ್ಞಾನಸಾಗರ ಪರಂಪರ-2025 ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಭಾರತ ವಿಜ್ಞಾನ ಮತ್ತು ತಂತ್ರಜ್ಞಾನ ಮಾತ್ರವಲ್ಲ, ದೇಶ ಸಾಮಾಜಿಕವಾಗಿ ಮುಂದುವರಿಯಬೇಕಾದರೆ ವಿಜ್ಞಾನದಿಂದ ಮಾತ್ರ ಸಾಧ್ಯ. ಬೇರೆ ದೇಶಗಳು 50ರ ದಶಕದಲ್ಲೇ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದ್ದವು, ಆಗ ಭಾರತದ ಈ ಕ್ಷೇತ್ರದ ಸಾಧನೆ ಶೂನ್ಯವಾಗಿತ್ತು. ಅನೇಕ ಶ್ರೇಷ್ಠ ವಿಜ್ಞಾನಿಗಳು ಛಲಬಿಡದೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಅತಿ ದೊಡ್ಡ ಸಾಧನೆ ಮಾಡುವಂತೆ ಇಸ್ರೋವನ್ನು ಕಟ್ಟಿ ಬೆಳೆಸಿದರು. ಇಂದು ಬೇರೆ ದೇಶಗಳನ್ನೂ ಮೀರಿಸಿ, ಬಾಹ್ಯಾಕಾಶ ಸಂಬಂಧ ಯಾವುದೇ ದೇಶ ಮಾಡದ ಅನೇಕ ಸಾಧನೆಗಳನ್ನು ಇಸ್ರೋ ಮಾಡಿದೆ. 2047ಕ್ಕೆ ಸ್ವಂತ ಬಾಹ್ಯಾಕಾಶ ನಿಲ್ದಾಣವನ್ನು ಭಾರತವು ಹೊಂದಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಕೆ.ನಾಗೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ಎನ್ನುವುದು ಅಂಕ ಗಳಿಕೆ, ಜ್ಞಾನಾರ್ಜನೆಗೆ ಮಾನದಂಡವಲ್ಲ. ಶಿಕ್ಷಣವನ್ನು ಮಕ್ಕಳ ಹೃದಯಕ್ಕೆ ತುಂಬದೆ, ಮೆದುಳಿಗೆ ಮಾಹಿತಿ ತುಂಬುವ ಶಿಕ್ಷಣವನ್ನಾಗಿಸಲಾಗಿದೆ. ಇದರಿಂದ ಮಕ್ಕಳಲ್ಲಿ ಸ್ವಂತಿಕೆ, ಸೃಜನಶೀಲತೆ ಇಲ್ಲದಂತಾಗಿದೆ. ಕೊಠಡಿಗಳಲ್ಲಿ ಬೋಧಿಸುವ ಪಾಠದ ಜತೆಗೆ ಕಲೆ, ಕ್ರೀಡೆ, ಸಂಸ್ಕಾರ, ಸಂಸ್ಕೃತಿ, ನಾಡಹಬ್ಬ ಸೇರಿ ಸರ್ವತ್ತೋಮುಖ ಬೆಳವಣಿಗೆಗೆ ಮುಂದಾಗಿಬೇಕು ಎಂದು ಕಿವಿಮಾತು ಹೇಳಿದರು.
ವಿಶೇಷ ಅತಿಥಿಯಾಗಿ ಆಗಮಿಸಿದ್ದ ಪ್ಯಾರಾ ಒಲಿಂಪಿಕ್ ಈಜುಗಾರ ಕೆ.ಎಸ್.ವಿಶ್ವಾಸ್ ಮಾತನಾಡಿ, ಅಂಗವೈಕಲ್ಯ ಇರುವುದರಿಂದ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಜನರು ಭಾವಿಸುತ್ತಾರೆ. ಹೆಚ್ಚಿನ ಅಂಗವೈಕಲ್ಯ ಹೊಂದಿರುವ ಜನರು ಪ್ರತಿಭೆಯನ್ನು ಹೊಂದಿರುತ್ತಾರೆ. ಆದರೆ ಅವುಗಳನ್ನು ಪ್ರದರ್ಶಿಸಲು ಯಾವುದೇ ಅವಕಾಶಗಳನ್ನು ಹೊಂದಿರುವುದಿಲ್ಲ. ನಾವು ಏನು ಮಾಡುವುದರಲ್ಲಿ ಉತ್ತಮರು ಎಂಬುದರ ಮೇಲೆ ನಾವು ಕೆಲಸ ಮಾಡಬೇಕು. ಯಶಸ್ಸು ಎಂದಿಗೂ ಸಾಯುವುದಿಲ್ಲ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ತಾಲೂಕು ದಂಡಾಧಿಕಾರಿ ಜಿ.ಎಸ್.ಶಂಕರಪ್ಪ, ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಕೆ.ಎನ್.ಅನಿಲ್ ಮಾತನಾಡಿದರು. ಸಂಸ್ಥೆಯ ಮುಖ್ಯ ಕಾರ್ಯಕಾರಿ ನಿರ್ದೇಶಕಿ ಡಾ.ಭಾರತಿ ನಾಗೇಶ್ ಪ್ರಾಸ್ತವಿಕವಾಗಿ ಮಾತನಾಡಿದರು. ಡೀನ್ ಡಾ.ಸುಜಾ ಫಿಲಿಪ್ ವಾರ್ಷಿಕ ವರದಿ ಮಂಡಿಸಿದರು. ಲಂಡನ್ ರಾಯಲ್ ಕಾಲೇಜ್ ಆಫ್ ರೆಡಿಯಾಲಾಜಿಸ್ಟ್ ಸಂಸ್ಥೆಯಲ್ಲಿ ಫೆಲೋ ಆಫ್ ರಾಯಲ್ ಕಾಲೇಜ್ ಆಫ್ ರೆಡಿಯಾಲಾಜಿಸ್ಟ್ ಪದವಿ ಪಡೆದ ವೈದ್ಯೆ ಡಾ.ನಿಖಿತಾ ನಾಗೇಶ್ ಅವರನ್ನು ಸನ್ಮಾನಿಸಲಾಯಿತು.
ಶಾಲೆಯ ಪಠ್ಯೇತರ ಚಟುವಟಿಕೆಯಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಸಂಸ್ಥೆಯ ಆಡಳಿತಾಧಿಕಾರಿ ಪಿಲಿಫ್, ನಿರ್ದೇಶಕರಾದ ನಂಜೇಗೌಡ, ನಾರಾಯಣ್, ಸರೋಜಾ, ಲಕ್ಷ್ಮಣ್, ಬೋಧಕ ವರ್ಗ ಹಾಗೂ ಪಾಲಕರು ಸೇರಿದಂತೆ ಇತರರು ಭಾಗವಹಿಸಿದ್ದರು. ನಂತರ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.