ಹಾಸನ ನಗರದ ಅಂಬೇಡ್ಕರ್ ಭವನದಲ್ಲಿ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆ, ಪದಗ್ರಹಣ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಎಸ್.ಚೌಡಪ್ಪ, ಜಿ.ರಂಗನಾಥಸ್ವಾಮಿ, ಎಂ.ಎಸ್.ರವಿಪ್ರಕಾಶ್, ಎಸ್.ಎನ್. ಶಿವಕುಮಾರ್, ಎಸ್.ಎನ್.ಶುಭಮಂಗಳಾ ಇತರರಿದ್ದರು.
- ನೌಕರರು ಸಂಘಟಿತರಾದರೆ ಸಮಸ್ಯೆಗಳಿಗೆ ಸರ್ಕಾರ ಸ್ಪಂದನೆ
- ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಅಧ್ಯಕ್ಷ ಎಸ್.ಚೌಡಪ್ಪ ಹೇಳಿಕೆ
ಹಾಸನ: ಶಿಕ್ಷಣ ಇಲಾಖೆಯ ನೌಕರರು ಸಂಘಟಿತರಾದರೆ ಸರ್ಕಾರವೂ ಸಮಸ್ಯೆಗಳಿಗೆ ಸ್ಪಂದಿಸಬೇಕಾಗುತ್ತದೆ ಎಂದು ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಅಧ್ಯಕ್ಷ ಎಸ್.ಚೌಡಪ್ಪ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆ, ಪದಗ್ರಹಣ ಹಾಗೂ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಶಿಕ್ಷಕರ ಸಂಘದಲ್ಲಿ ಇರುವ ಶೇ.70ರಷ್ಟು ಸಮಸ್ಯೆಗಳನ್ನು ತಮ್ಮಲ್ಲೇ ಕುಳಿತು ಬಗೆಹರಿಸಿಕೊಳ್ಳಬೇಕು. ರಾಜ್ಯದಲ್ಲಿ ಸುಮಾರು ನಾಲ್ಕು ಲಕ್ಷ ಸರ್ಕಾರಿ ಮತ್ತು ಅನುದಾನಿತ ವಸತಿ ಶಾಲೆಗಳ ಶಿಕ್ಷಣ ಇಲಾಖೆ ನೌಕರರು ಇದ್ದಾರೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ನಾವು ಒಂದೇ ವೇದಿಕೆಯಲ್ಲಿ ಒಂದಾಗಿದ್ದರೆ ಸರ್ಕಾರವೂ ನಮ್ಮ ಮಾತು ಕೇಳದೇ ಇರಲು ಸಾಧ್ಯವಿಲ್ಲ. ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಮಾನತೆ ಮತ್ತು ಒಗ್ಗಟ್ಟು ಸಾಧಿಸಿದಾಗ ಮಾತ್ರ ಗುರಿ ಸಾಧನೆ ಸಾಧ್ಯ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಡಿ.ರಮೇಶ್ ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿ ನಾವು ಎಲ್ಲರೂ ಒಂದೇ ಕುಟುಂಬದವರು. ನಾನು ಯಾವುದೇ ರಾಜಕೀಯ ಸಂಘಟನೆಯೊಂದಿಗೆ ಸಂಬಂಧ ಹೊಂದಿಲ್ಲ. 1ನೇ ತರಗತಿಯಿಂದ ಪಿಯುವರೆಗೆ ಕೆಪಿಎಸ್ ಮಾದರಿಯಲ್ಲಿ ಎಲ್ಲ ವೃಂದಗಳನ್ನೂ ಒಂದೇ ಸಂಘಟನೆಯಡಿ ಒಗ್ಗೂಡಿಸುವ ಪ್ರಯತ್ನ ನಡೆಯುತ್ತಿದೆ ಎಂದರು.
ಶಿಕ್ಷಣ ಇಲಾಖೆ ನೌಕರರ ಸಾಮಾನ್ಯ ಹಿತಾಸಕ್ತಿಯನ್ನು ರಕ್ಷಿಸುವುದು, ನೌಕರರ ನಡುವೆ ಬಾಂಧವ್ಯ ಬೆಳೆಸುವುದು ಹಾಗೂ ಪರಸ್ಪರ ಸಹಕಾರದ ಮನೋಭಾವ ವೃದ್ಧಿಸುವುದು ಸಂಘದ ಪ್ರಮುಖ ಗುರಿಗಳಾಗಿವೆ. ಸೇವಾ ವೇತನ, ನಿವೃತ್ತಿ ವೇತನ, ವಿವಿಧ ಭತ್ಯೆಗಳು ಹಾಗೂ ಭವಿಷ್ಯ ನಿಧಿ ಸಂಬಂಧಿತ ವಿಚಾರಗಳಲ್ಲಿ ಸುಧಾರಣೆಗಾಗಿ ಕ್ರಮ ಕೈಗೊಳ್ಳುವುದು ಸಂಘದ ಧ್ಯೇಯವಾಗಿದೆ ಎಂದು ವಿವರಿಸಿದರು.
ಜತೆಗೆ ಸಂಘದ ಚಟುವಟಿಕೆಗೆ ಅಗತ್ಯವಿರುವ ವಂತಿಕೆ ಮತ್ತು ದೇಣಿಗೆಗಳನ್ನು ಸಂಗ್ರಹಿಸಿ ಪಾರದರ್ಶಕವಾಗಿ ಬಳಸುವ ವ್ಯವಸ್ಥೆಯೂ ಮಾಡಲಾಗಿದೆ ಎಂದರು.
ಸ್ವಜನಪಕ್ಷಪಾತ, ಕೋಮಭಾವನೆ, ಭ್ರಷ್ಟಾಚಾರ ಮತ್ತು ಸಾಮಾಜಿಕ ಭೇದಭಾವಗಳಿಂದ ದೂರವಿದ್ದು ಸಾರ್ವಜನಿಕ ಸೇವೆಯಲ್ಲಿ ಧಕ್ಷತೆ ಹೆಚ್ಚಿಸುವುದು ಹಾಗೂ ಶಿಕ್ಷಣ ಇಲಾಖೆ ನೌಕರರ ಶ್ರೇಯೋಭಿವೃದ್ಧಿ ಸಾಧಿಸುವುದು ಸಂಘದ ಮುಖ್ಯ ಉದ್ದೇಶ ಎಂದು ಹೇಳಿದರು.
ಇದೆ ವೇಳೆ ಪದಾಧಿಕಾರಿಗಳ ಪದಗ್ರಹಣ ನೆರವೇರಿತು. ಜಿಲ್ಲೆಯ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಕಾಲೇಜು, ಬೋಧಕೇತರ ಹಾಗೂ ಲಿಪಿಕ ವರ್ಗದ ನೌಕರರಿಗೆ ಉತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ರಂಗನಾಥಸ್ವಾಮಿ, ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರವಿಪ್ರಕಾಶ್, ರಾಜ್ಯ ಉಪಾಧ್ಯಕ್ಷ ಎಸ್.ಎನ್.ಶಿವಕುಮಾರ್, ವಿಭಾಗೀಯ ಕಾರ್ಯಾಧ್ಯಕ್ಷೆ ಎಸ್.ಎನ್. ಶುಭಮಂಗಳ, ರಾಜ್ಯ ಜಂಟಿ ಕಾರ್ಯದರ್ಶಿ ಸಿ.ಎಂ.ನಾಗರತ್ನ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ರಂಗನಾಥ್, ಕೆ.ಪಿ.ನಾರಾಯಣ್, ರಾಜ್ಯ ಪರಿಷತ್ ಸದಸ್ಯ ಎಸ್.ಎನ್. ಶಿವಕುಮಾರ್, ಜಿಲ್ಲಾ ಕಾರ್ಯದರ್ಶಿ ಎಂ.ಪಿ. ಶ್ರೀಕಾಂತ್ ಇತರರಿದ್ದರು.