- ನನ್ನನ್ನು ಮಂತ್ರಿ ಮಾಡುವ ಭರವಸೆ ಇದೆ
- ಶಾಸಕ ಶಿವಲಿಂಗೇಗೌಡ ನವದೆಹಲಿಯಲ್ಲಿ ಹೇಳಿಕೆ
- ರಾಜ್ಯ ನಾಯಕರು, ಹೈಕಮಾಂಡ್ ಮುಂದೆ ಹಕ್ಕೊತ್ತಾಯ
ಹಾಸನ: ರಾಜ್ಯ ಕಾಂಗ್ರೆಸ್ ಸರ್ಕಾರದ ನೂತನ ಸಚಿವ ಸಂಪುಟದಲ್ಲಿ ಸಚಿವರಾಗಬೇಕು ಎಂದು ಹಲವು ಶಾಸಕರು, ಮಾಜಿ ಸಚಿವರು ನವದೆಹಲಿಗೆ ದೌಡಾಯಿಸಿದ್ದಾರೆ. ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರೂ ಆಗಿರುವ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರೂ ನವದೆಹಲಿ ಪ್ರವಾಸ ಕೈಗೊಂಡಿದ್ದಾರೆ.
ಏನಾದರೂ ಸರಿ ನಾನೂ ಮಂತ್ರಿಯಾಗಬೇಕು ಎಂದು ಪಣ ತೊಟ್ಟಿರುವ ಶಿವಲಿಂಗೇಗೌಡ, ಈ ಸಂಬಂಧ ತಮ್ಮ ಆಪ್ತ ನಾಯಕರ ಮೂಲಕ ಹೈಕಮಾಂಡ್ ಮತ್ತು ಹಿರಿಯ ನಾಯಕರ ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತಿದ್ದಾರೆ.
ಈ ವೇಳೆ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುತ್ತಾರೆ ಎಂದು ನನಗೆ ಗೊತ್ತಿರಲಿಲ್ಲ. ಹೈಕಮಾಂಡ್ ಸೂಚನೆ ಮೇರೆಗೆ ಅವರು ರಾಜೀನಾಮೆ ನೀಡಿದ್ದಾರೆ. ಹೈಕಮಾಂಡ್ ಅವರನ್ನು ಗೌರವದಿಂದ ನಡೆಸಿಕೊಂಡಿದೆ ಎಂದ ಅವರು, ನೂತನ ಸಚಿವ ಸಂಪುಟದಲ್ಲಿ ಮಂತ್ರಿ ಆಗುವ ಆಸೆ ಇಟ್ಟುಕೊಂಡಿದ್ದೇನೆ ಎಂದರು.
ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ ಎಂದರೆ ಆತ್ಮವಂಚನೆ ಆಗಲಿದೆ. ನಾನು ಒಟ್ಟು ನಾಲ್ಕು ಬಾರಿ ಶಾಸಕನಾಗಿದ್ದೇನೆ. ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದ ನಂತರವೂ ಗೆಲುವು ಸಾಧಿಸಿದ್ದೇನೆ. 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ಆಸೆಯಿಂದಲೇ ಈ ಪಕ್ಷಕ್ಕೆ ಬಂದಿದ್ದೇನೆ. ನಾನು ಕಾಂಗ್ರೆಸ್‌ಗೆ ಬರುವಾಗ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸೇರಿ ಮೂವರು ನಾಯಕರು ನಿನ್ನನ್ನು ಮಂತ್ರಿ ಮಾಡುತ್ತೇವೆ ಎಂದು ಮಾತು ಕೊಟ್ಟಿದ್ದಾರೆ. ಮೊದಲ ಅವಧಿಯಲ್ಲಿ ಆ ಅವಕಾಶ ಸಿಗಲಿಲ್ಲ. ಈ ಬಾರಿ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದರು. ಇದೇ ವೇಳೆ ನಿಮಗೆ ಯಾವ ಖಾತೆ ಬೇಕು ಎಂಬ ಪ್ರಶ್ನೆಗೆ ಮೊದಲು ಮಂತ್ರಿ ಮಾಡಲಿ, ನಂತರ ಖಾತೆ ಯಾವುದೆಂದು ನೋಡೋಣ ಎಂದರು.