ಚಿಕ್ಕಬಳ್ಳಾಪುರದಲ್ಲಿ ಬೃಹತ್ ಬೈಕ್ ರ‌್ಯಾಲಿ ಹಾಗೂ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹಾಸನ ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ಜನ ರೈತರು ರೈಲಿನ ಮೂಲಕ ಪ್ರಯಾಣ ಬೆಳೆಸಿದರು.
- ಜಿಲ್ಲೆಯಿಂದ ಚಿಕ್ಕಬಳ್ಳಾಪುರಕ್ಕೆ ನೂರಾರು ರೈತರು ಪ್ರಯಾಣ
- ರೈತರಿಂದ ಬೈಕ್‌ರ‌್ಯಾಲಿ, ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ
ಹಾಸನ: ರಾಜ್ಯದಲ್ಲಿ ರೈತರ ಭೂಮಿ, ಬದುಕು ಮತ್ತು ಕೃಷಿ ಹಕ್ಕುಗಳ ರಕ್ಷಣೆಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹೋರಾಟ ರೂಪಿಸಿದ್ದು, ಜೂ.5 ರಂದು ಚಿಕ್ಕಬಳ್ಳಾಪುರದಲ್ಲಿ ಬೃಹತ್ ಬೈಕ್ ರ‌್ಯಾಲಿ ಹಾಗೂ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ರೈತರು ರೈಲಿನ ಮೂಲಕ ಬುಧವಾರ ಪ್ರಯಾಣ ಬೆಳೆಸಿದರು.
ಇದೇ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಬಾಬು, 81 ದಿನಗಳಿಂದ ನಡೆಯುತ್ತಿರುವ ನಿರಂತರ ಧರಣಿ ಹೋರಾಟದ ಮುಂದುವರಿದ ಭಾಗವಾಗಿ ಈ ಪ್ರತಿಭಟನೆ ರೂಪುಗೊಂಡಿದ್ದು, ಶುಕ್ರವಾರ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ನಡೆಯಲಿದೆ. ಅದರಲ್ಲಿ ಭಾಗಿಯಾಗಲು ನಾವೆಲ್ಲರೂ ಹೊರಟಿದ್ದೇವೆ. ರಾಜ್ಯ ಸರ್ಕಾರ ಕೈಗಾರಿಕಾ ಅಭಿವೃದ್ಧಿ ಹೆಸರಿನಲ್ಲಿ ಫಲವತ್ತಾದ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳುತ್ತಿರುವುದು ರೈತ ಸಮುದಾಯವನ್ನು ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ಆರೋಪಿಸಿದರು.
ಕಳೆದ ಎರಡು ದಶಕಗಳಲ್ಲಿ ಕೈಗಾರಿಕೆಗಳಿಗಾಗಿ ಲಕ್ಷಾಂತರ ಎಕರೆ ಭೂಮಿ ಸ್ವಾಧೀನಪಡಿಸಿ ಕೊಂಡಿದ್ದರೂ, ಅದರಲ್ಲಿ ಬಹುಪಾಲು ಭೂಮಿ ಕೈಗಾರಿಕಾ ಉದ್ದೇಶಕ್ಕೆ ಬಳಕೆಯಾಗದೆ ಖಾಲಿ ಬಿದ್ದಿದೆ. ಇದು ರೈತರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದೆ. ಕೃಷಿ ಆಧಾರಿತ ಗ್ರಾಮೀಣ ಆರ್ಥಿಕ ವ್ಯವಸ್ಥೆಯನ್ನು ಕುಸಿಯುವಂತೆ ಮಾಡುತ್ತಿದೆ ಎಂದು ದೂರಿದರು.
ಮುಂದುವರಿದು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯ 13 ಗ್ರಾಮಗಳ ಸುಮಾರು 2,823 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಭೂಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ರೈತರ ಆತಂಕ ತರಿಸಿದೆ ಎಂದರು. ಇದನ್ನು ಖಂಡಿಸಿ ಇತ್ತೀಚೆಗೆ ಪ್ರತಿಭಟನೆ ನಡೆಸಿದ ವೇಳೆ ಸರ್ಕಾರ ಹೋರಾಟಗಾರರ ಮೇಲೆ ಬಲಪ್ರಯೋಗ ನಡೆಸಿರುವುದನ್ನು ಖಂಡಿಸಿದರು.
ಇದು ಶಿಡ್ಲಘಟ್ಟಕ್ಕೆ ಮಾತ್ರ ಸೀಮಿತ ಅಲ್ಲ, ರಾಜ್ಯದ ಸಾವಿರಾರು ಗ್ರಾಮಗಳಲ್ಲಿ ಇಂಥ ಪ್ರಕ್ರಿಯೆ ನಡೆದಿದೆ. ಇದು ನಿಲ್ಲಬೇಕು. ರೈತರ ಹಿತಾಸಕ್ತಿಗೆ ಧಕ್ಕೆ ತರುವ ತಿದ್ದುಪಡಿಗಳನ್ನು ಸರ್ಕಾರ ಹಿಂಪಡೆಯಬೇಕು. ರೈತರ ಒಪ್ಪಿಗೆ ಇಲ್ಲದೆ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಬಾರದು ಎಂಬುದು ಹೋರಾಟದ ಪ್ರಮುಖ ಉದ್ದೇಶ ಎಂದರು. ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರು, ಮಹಿಳೆಯರು ಇದ್ದರು.