ಅರಸೀಕೆರೆ ನಗರದ ವಿದ್ಯಾನಗರದ ಶ್ರೀಮಾರುತಿ ಸಚ್ಚಿದಾನಂದ ಆಶ್ರಮದಲ್ಲಿನ ಶ್ರೀಲಕ್ಷ್ಮೀನರಸಿಂಹ ಸಪರಿವಾರ ದೇವತೆಗಳ ದೇವಾಲಯದಲ್ಲಿ ಹೋಳಿ ಹುಣ್ಣಿಮೆ ಹಾಗೂ ಖಗ್ರಾಸ ಚಂದ್ರಗ್ರಹಣ ಅಂಗವಾಗಿ ಏರ್ಪಡಿಸಿದ್ದ ವಿಶೇಷ ಹವನ ಹೋಮ ಪೂಜಾ ಕಾರ್ಯದ ನಂತರ ಆಶ್ರಮದ ಪರಂಪರಾ ಅವಧೂತರಾದ ಶ್ರೀಸತೀಶ್ ಶರ್ಮ ಗುರೂಜಿ ಭಕ್ತರಿಗೆ ಫಲ, ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಅರಸೀಕೆರೆ ಗ್ರಾಮಾಂತರ: ಅನೇಕ ಜನ್ಮಗಳ ಪುಣ್ಯದ ಫಲವಾಗಿ ಮಾನವ ಜನ್ಮ ದೊರೆತಿದೆ. ನಿಷ್ಕಲ್ಮಶವಾದ ಕರ್ತವ್ಯದಿಂದ ಅದನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಶ್ರೀಮಾರುತಿ ಸಚ್ಚಿದಾನಂದ ಆಶ್ರಮದ ಪರಂಪರಾ ಅವಧೂತ ಶ್ರೀ ಸತೀಶ್‌ಶರ್ಮ ಗುರೂಜಿ ತಿಳಿಸಿದರು.
ನಗರದ ಹೊರ ವಲಯದ ವಿದ್ಯಾನಗರದ ಶ್ರೀಮಾರುತಿ ಸಚ್ಚಿದಾನಂದ ಆಶ್ರಮದಲ್ಲಿ ಹೋಳಿ ಹುಣ್ಣಿಮೆ ಹಾಗೂ ಖಗ್ರಾಸ ಚಂದ್ರಗ್ರಹಣ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾವಿರಾರು ವರ್ಷಗಳ ಹಿಂದೆಯೇ ಶ್ರೀಶಂಕರಾಚಾರ್ಯರು ಶ್ರೀಲಕ್ಷ್ಮೀ ನರಸಿಂಹ ಪಂಚರತ್ನ ಸ್ತೋತ್ರಗಳ ಧರ್ಮ ಸಂದೇಶವನ್ನು ನೀಡಿದ್ದಾರೆ. ಆ ಸಂದೇಶದಂತೆ ನಾವು ಬಾಳಬೇಕು. ಇಲ್ಲದೇ ಇದ್ದರೆ ಎಷ್ಟೇ ಪೂಜೆ, ಪುನಸ್ಕಾರ ಮಾಡಿದರೂ ಅದರ ಫಲ ಸಿಗಲಾರದು. ನಾವು ಸನ್ಮಾರ್ಗದಲ್ಲಿ ಕರ್ತವ್ಯ ಪಾಲನೆ ಮಾಡಿದರೆ ಭಗವಂತನ ಆರ್ಶೀವಾದ ಲಭ್ಯವಾಗುತ್ತದೆ ಎಂದು ತಿಳಿಸಿದರು.
ಆಶ್ರಮದ ಪ್ರಧಾನ ಅರ್ಚಕರಾದ ಆದಿತ್ಯ ಶರ್ಮ ಮಾತನಾಡಿದರು. ಕಾರ್ಯಕ್ರಮದಲ್ಲಿ ಶ್ರೀಲಕ್ಷ್ಮೀ ನರಸಿಂಹ ಕ್ಷೇತ್ರ ಅಭಿವೃದ್ಧಿ ಸಂಘ ಹಾಗೂ ಅವಧೂತ ಶಿಷ್ಯ ಬಳಗದ ಸದಸ್ಯರು ಸೇರಿದಂತೆ ನೂರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು.
ಖಗ್ರಾಸ ಚಂದ್ರ ಗ್ರಹಣ ನಿಮಿತ್ತ ದೇವಾಲಯದ ಬಾಗಿಲು ಮುಚ್ಚಲಾಯಿತು. ಗ್ರಹಣ ಮೋಕ್ಷದ ನಂತರ ವಿಶೇಷ ಅಭಿಷೇಕ ಪೂಜಾ ಕಾರ್ಯಗಳು ನೆರೆವೇರಿದವು. ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.