ಹೊಳೆನರಸೀಪುರ ತಾಲೂಕಿನ ಗನ್ನಿಕಡ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ರಸ್ತೆ ಬದಿಯ ಬೃಹತ್ ಮರಗಳನ್ನು ನಾಶ ಮಾಡಿರುವುದು.
- ಅರಣ್ಯ ಇಲಾಖೆ ಒಪ್ಪಿಗೆ ಪಡೆಯದ ಅಧಿಕಾರಿಗಳು
ಹೊಳೆನರಸೀಪುರ: ತಾಲೂಕಿನ ಗಡಿ ಭಾಗ ಗನ್ನೀಕಡ ರಸ್ತೆಯ ಬದಿಯಲ್ಲಿ ಹಲವು ದಶಕಗಳಿಂದ ಸಾರ್ವಜನಿಕರಿಗೆ ನೆರಳಾಗಿದ್ದ ಬೃಹತ್ ಮರಗಳನ್ನು ಶನಿವಾರ ಕಡಿದು ಹಾಕಲಾಗಿದೆ.
ಉದ್ಯಾನ ನಿರ್ಮಾಣ ನೆಪದಲ್ಲಿ ಯಾವುದೇ ಸ್ಪಷ್ಟ ಮಾಹಿತಿ ಇಲ್ಲದೆ ಮರಗಳ ಕಡಿಯಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದು ಇದರಿಂದ ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳು ಸುತ್ತಮುತ್ತಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುತ್ತಮುತ್ತಲ ಗ್ರಾಮಸ್ಥರ ಪ್ರಕಾರ ಗನ್ನೀಕಡ ರಸ್ತೆಯ ಎರಡೂ ಬದಿಗಳಲ್ಲಿದ್ದ ಹಳೆಯ ದೊಡ್ಡ ಮರಗಳನ್ನು ಒಂದೇ ದಿನದಲ್ಲಿ ತೆರವುಗೊಳಿಸಿದ್ದಾರೆ. ಅರಣ್ಯ ಇಲಾಖೆ ಅನುಮತಿ ಪಡೆಯದೆ ಮರಗಳನ್ನು ಕಡಿದಿದ್ದಾರೆ ಎಂಬುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಇಷ್ಟೆಲ್ಲ ಆಗಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಜನ ವಸತಿ ಇಲ್ಲದಿರುವ ಸ್ಥಳದಲ್ಲಿ ರಸ್ತೆ ಬದಿಯಲ್ಲಿ ಪಾರ್ಕ್ ಅವಶ್ಯಕತೆ ಇತ್ತೇ ಎಂದು ನಾಗರಿಕರು ಪ್ರಶ್ನಿಸಿದ್ದಾರೆ. ಸುತ್ತಮುತ್ತಲ ಗ್ರಾಮಸ್ಥರು ಸಂಘಟನೆಗಳ ಮುಖಂಡರು ತಕ್ಷಣ ಸ್ಥಳಕ್ಕೆ ಧಾವಿಸಿ ತಡೆ ಹಿಡಿದಿದ್ದಾರೆ. ಕಾನೂನು ಉಲ್ಲಂಘನೆ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮರಗಳ ಮಾರಣ ಹೋಮ ವಿರುದ್ಧ ಎಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಅನುಮತಿ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದ್ದು ನಿಯಮ ಉಲ್ಲಂಘನೆ ಕಂಡು ಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಗನ್ನಿಕಡ ವೃತ್ತದಲ್ಲಿ ಪಾರ್ಕ್ ಮಾಡುವ ಉದ್ದೇಶದಿಂದ ಮರಗಳನ್ನು ಕಡಿಯಲು ಪಿಡಬ್ಲುೃಡಿ ಇಲಾಖೆಯವರು ಹೊಳೆನರಸೀಪುರ ಅರಣ್ಯ ಇಲಾಖೆಗೆ ಮನವಿ ನೀಡಿದ್ದರು. ಅರಣ್ಯ ಇಲಾಖೆಯವರು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದರು. ಆದರೆ ಮೇಲಧಿಕಾರಿಗಳು ಅನುಮತಿ ಕೊಡುವ ಮುನ್ನವೇ ಪಿಡಬ್ಲುೃಡಿ ಇಲಾಖೆ ಇಂಜಿನಿಯರ್ ಒಬ್ಬರು ಕಾನೂನನ್ನು ಗಾಳಿಗೆ ತೂರಿ ಮರಗಳ ಮಾರಣ ಹೋಮ ಮಾಡಿದ್ದಾರೆ ಎನ್ನಲಾಗಿದೆ.