ಹಾಸನ ನಗರದ ಸಾಲಗಾಮೆ ರಸ್ತೆಯ ಭಾರತಿ ವಿದ್ಯಾ ಮಂದಿರದಲ್ಲಿ ಇತ್ತೀಚೆಗೆ ನಡೆದ ಮನೆಮನೆ ಕವಿಗೋಷ್ಠಿ ವಾರ್ಷಿಕೋತ್ಸವಲ್ಲಿ ಕವನ ಸಂಕಲನವನ್ನು ಗಣ್ಯರು ಬಿಡುಗಡೆ ಮಾಡಿದರು. ಡಾ.ವಸಂತಕುಮಾರ್ ಪೆರ್ಲ, ಭ.ರಾ.ವಿಜಯಕುಮಾರ್, ಎನ್.ಎಲ್.ಚನ್ನೇಗೌಡ, ಸುಕನ್ಯಾ ಮುಕುಂದ ಇತರರಿದ್ದರು. 
ಹಾಸನ

ಮನೆಮನೆ ಕವಿಗೋಷ್ಠಿ ಹೊಸ ಕವಿಗಳಿಗೆ ತಳಹದಿ

ಪ್ರಮುಖ ಮುಖ್ಯಾಂಶಗಳು

  • ಮನೆಮನೆ ಕವಿಗೋಷ್ಠಿ ಹೊಸ ಕವಿಗಳಿಗೆ ತಳಹದಿ
  • ಸಾಹಿತ್ಯ ಸಂಘಟನೆ ಸಂಸ್ಥಾಪಕ ಡಾ.ವಸಂತಕುಮಾರ್ ಪೆರ್ಲ ಹೇಳಿಕೆ

ಹಾಸನ:

ಜಿಲ್ಲೆಯ ಮನೆಮನೆ ಕವಿಗೋಷ್ಠಿ ಸಾಹಿತ್ಯ ಸಂಘಟನೆ ರಾಜ್ಯಕ್ಕೆ ಮಾದರಿಯಾಗಿದ್ದು, ನೂರಾರು ಕವಿಗಳನ್ನು ಬೆಳೆಸುತ್ತಿದೆ ಎಂದು ಸಂಘಟನೆಯ ಸಂಸ್ಥಾಪಕ ಡಾ.ವಸಂತಕುಮಾರ್ ಪೆರ್ಲ ಹೇಳಿದರು.

ನಗರದ ಸಾಲಗಾಮೆ ರಸ್ತೆಯ ಭಾರತಿ ವಿದ್ಯಾ ಮಂದಿರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮನೆಮನೆ ಕವಿಗೋಷ್ಠಿಯ 29ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಂಘಟನೆಯಿಂದ ಹೊರತರಲಾದ ಮನೆಮನೆ ಕಾವ್ಯ ಸೌರಭ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿ, 75 ಕವಿಗಳ ಕವನಗಳನ್ನು ಒಳಗೊಂಡ ಈ ಸಂಕಲನವು ಹಾಸನ ಜಿಲ್ಲೆಯ ಕವಿಗೋಷ್ಠಿ ಇತಿಹಾಸದಲ್ಲಿ ಹೆಗ್ಗುರುತಾಗಿದೆ ಎಂದರು.

ಹಿರಿಯ ಸಂಘಟಕ ಭ.ರಾ. ವಿಜಯಕುಮಾರ್ ಮಾತನಾಡಿ, ಕನ್ನಡ ಸಾಹಿತ್ಯವು ಕಾವ್ಯರೂಪದಿಂದಲೇ ಹೆಚ್ಚು ಬೆಳೆದಿದೆ. 29 ವರ್ಷದಿಂದ ನಿರಂತರವಾಗಿ ನಡೆಯುತ್ತಿರುವ ಈ ಸಂಘಟನೆ ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಎನ್.ಎಲ್.ಚನ್ನೇಗೌಡ ಮಾತನಾಡಿ, ಮನೆಮನೆ ಕವಿಗೋಷ್ಠಿಯಿಂದಲೇ ತಮಗೆ ಸಾಹಿತ್ಯ ಪ್ರೋತ್ಸಾಹ ಮತ್ತು ಪ್ರಶಸ್ತಿಗಳು ದೊರೆತಿವೆ ಎಂದು ನೆನಪಿಸಿಕೊಂಡರು.

ವಿಮರ್ಶೆಯಿಂದ ಕವಿಗಳಿಗೆ ಉತ್ತಮ ಪ್ರೋತ್ಸಾಹ ದೊರೆತಿದೆ ಎಂದರು. ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಚಂದ್ರಕಾಂತ ಪಡೆಸೂರ 343 ದಿನ ನಿರಂತರವಾಗಿ ಕವಿಗೋಷ್ಠಿ ನಡೆಸಿರುವುದು ದಾಖಲೆಯಾಗಿದೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ 38 ಕವಿಗಳು ಕವನವಾಚನ ಮಾಡಿದರು. ಸುಶೀಲಾ ಸೋಮಶೇಖರ್, ಲೀಲಾವತಿ, ಎಸ್. ಲಲಿತ, ಪರಿಮಳಾ ಮಹೇಶ್, ಕುಮಾರ ಛಲವಾದಿ, ಜಯಂತಿ ಚಂದ್ರಶೇಖರ್, ದಿಬ್ಬೂರು ರಮೇಶ್, ಸಮುದ್ರವಳ್ಳಿ ವಾಸು, ಪ್ರೇಮಾ ಪ್ರಶಾಂತ್ ಇತರರಿದ್ದರು.