ಸ್ವರೂಪ್ ಪ್ರಕಾಶ್ 
ಹಾಸನ

ಸಿದ್ದರಾಮಯ್ಯ ಮೇಲೆ ಇದ್ದ ನಿರೀಕ್ಷೆ ಹುಸಿ

ಪ್ರಸಿನ್ ಕೆ.ಆರ್

ಪ್ರಮುಖ ಮುಖ್ಯಾಂಶಗಳು

  • ಸಿದ್ದರಾಮಯ್ಯ ಮೇಲೆ ಇದ್ದ ನಿರೀಕ್ಷೆ ಹುಸಿ
  • ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಅಸಮಾಧಾನ
  • ರಾಜೀನಾಮೆ ಅವರ ಪಕ್ಷಕ್ಕೆ, ನಮಗೆ ಅಭಿವೃದ್ಧಿ ಮುಖ್ಯ
ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ವಿಚಾರ ಅವರ ಪಕ್ಷಕ್ಕೆ ಸಂಬಂಧಪಟ್ಟಿದ್ದು, ಆದರೆ ಅವರ ಅವಧಿಯಲ್ಲಿ ಜಿಲ್ಲೆಗೆ ಯಾವುದೇ ವಿಶೇಷ ಕೊಡುಗೆ ನೀಡಲಿಲ್ಲ, ಜಿಲ್ಲೆಯ ಜನರು ಇಟ್ಟುಕೊಂಡಿದ್ದ ನಿರೀಕ್ಷೆ ಹುಸಿಯಾಗಿದೆ ಎಂದು ಸ್ಥಳೀಯ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಬೇಸರ ಹೊರ ಹಾಕಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ತುಂಬಿದೆ. ಹಾಸನ ಜಿಲ್ಲೆಗೆ ಸಿದ್ದರಾಮಯ್ಯ ಅವರ ಕೊಡುಗೆ ಏನು ಅಂಥ ನಿಮಗೂ ಗೊತ್ತಿದೆ ಎಂದರು. ಯಾರು ಮುಖ್ಯಮಂತ್ರಿ ಆದರೆ ನಮಗೇನು, ಜಿಲ್ಲೆಗೆ ಅದರಲ್ಲೂ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಕೊಟ್ಟರೆ ತುಂಬ ಸಂತೋಷ ಎಂದು ತಿಳಿಸಿದರು.
ನಮ್ಮ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಾಗಿದೆ. ಇದಲ್ಲದೆ ಇನ್ನೂ ಸಾಕಷ್ಟು ಅಭಿವೃದ್ಧಿ ಕೆಲಸ-ಕಾರ್ಯಗಳು ಆಗಿವೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆದ ಮೇಲೆ ಏನು ಕೊಡುಗೆ ನೀಡುತ್ತಾರೆ, ಯಾವ ರೀತಿ ಅಭಿವೃದ್ಧಿ ಮಾಡುತ್ತಾರೆ ಕಾದು ನೋಡೋಣ ಎಂದು ಹೇಳಿದರು. ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ, ಮೂಲಸೌಕರ್ಯ ಹಾಗೂ ಜನಪರ ಯೋಜನೆಗಳು ಬರಬೇಕು. ಅದನ್ನು ನೀಡುವ ನಾಯಕನೇ ಜನರಿಗೆ ಮುಖ್ಯ ಎಂದು ಹೇಳಿದರು.
ಈ ವೇಳೆ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕಾರ್ಯ ಕುರಿತು ಪ್ರಶ್ನಿಸಿದ ಶಾಸಕರು, ಜೆಡಿಎಸ್ ಆಡಳಿತದಲ್ಲಿ ಹಾಸನ ಜಿಲ್ಲೆಗೆ ಅನೇಕ ಪ್ರಮುಖ ಯೋಜನೆಗಳು ಮಂಜೂರಾಗಿದ್ದವು. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ನಾವು ಅಡಿಪಾಯ ಹಾಕಿದ್ದೇವೆ. ಆದರೆ, ಉದ್ಘಾಟನೆ ಮಾಡುವ ವೇಳೆ ಮಾತ್ರ ಕಾಂಗ್ರೆಸ್ ನಾಯಕರು ಮುಂದೆ ಬರುತ್ತಾರೆ ಎಂದು ವ್ಯಂಗ್ಯ ವಾಡಿದರು. ಜಿಲ್ಲೆಯ ಜನರಿಗೆ ರಾಜಕೀಯ ಪೈಪೋಟಿಗಿಂತ ಅಭಿವೃದ್ಧಿಯೇ ಮುಖ್ಯ. ಹಾಸನ ಜಿಲ್ಲೆ ರಾಜ್ಯದಲ್ಲಿ ರಾಜಕೀಯವಾಗಿ ಪ್ರಮುಖ ಸ್ಥಾನ ಹೊಂದಿದ್ದರೂ, ಆಳುವ ಸರ್ಕಾರಗಳು ನಿರೀಕ್ಷಿತ ಪ್ರಮಾಣದಲ್ಲಿ ಜಿಲ್ಲೆಯತ್ತ ಗಮನ ನೀಡುತ್ತಿಲ್ಲ ಎಂದು ಹೇಳಿದರು.
ಈ ವೇಳೆ ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಎಚ್.ಎಸ್.ವಾಸುದೇವ್, ಸಿ.ಕ್ರಾಂತಿ ಪ್ರಸಾದ್‌ತ್ಯಾಗಿ, ಗಿರೀಗೌಡ, ಬಿದರಿಕೆರೆ ಜಯರಾಮ್, ಜಿಲ್ಲಾ ಜೆಡಿಎಸ್ ವಕ್ತಾರ ಹೊಂಗೆರೆ ರಘು ಇತರರಿದ್ದರು.