ವಿಜಯವಾಣಿ ವರದಿಗೆ ಸ್ಪಂದಿಸಿದ ಹಾಸನ ಜಿಲ್ಲಾ ಪ್ರವಾಸೋಧ್ಯಮ ಇಲಾಖೆ ಉಪ ನಿರ್ದೇಶಕರಾದ ರೂಪಾ ಅವರು ಶನಿವಾರ ಶ್ರವಣಬೆಳಗೊಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಸ್ಥಳೀಯರಿಂದ ಮಾಹಿತಿ ಪಡೆದರು.
ವಿಶ್ವವಿಖ್ಯಾತ ಪ್ರವಾಸಿತಾಣ ಹಾಗೂ ಧಾರ್ಮಿಕ ಕ್ಷೇತ್ರ ಶ್ರವಣಬೆಳಗೊಳದಲ್ಲಿ ವಾಹನ ಪಾರ್ಕಿಂಗ್ ಅವ್ಯವಸ್ಥೆಯ ಕುರಿತು ಶುಕ್ರವಾರ ವಿಜಯವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ವರದಿಯಿಂದ ಎಚ್ಚೆತ್ತ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವರದಿ ಪ್ರಕಟವಾದ ಬೆನ್ನಲ್ಲೇ ಹಾಸನ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರಾದ ರೂಪಾ ಅವರು ಶನಿವಾರ ಶ್ರವಣಬೆಳಗೊಳಕ್ಕೆ ಭೇಟಿ ನೀಡಿ ಪಾರ್ಕಿಂಗ್ ಸಮಸ್ಯೆಯಿರುವ ಸ್ಥಳಗಳನ್ನು ಪರಿಶೀಲಿಸಿದರು. ಪಟ್ಟಣಕ್ಕೆ ಆಗಮಿಸುವ ಪ್ರವಾಸಿಗರು ಹಾಗೂ ಯಾತ್ರಾರ್ಥಿಗಳ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದು, ಇದರಿಂದ ಮುಖ್ಯ ರಸ್ತೆಗಳು ಹಾಗೂ ಪ್ರಮುಖ ಸ್ಥಳಗಳ ಬಳಿ ವಾಹನ ದಟ್ಟಣೆ ಉಂಟಾಗುತ್ತಿರುವ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದರು.
ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಶ್ವತ ಹಾಗೂ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಲಭ್ಯವಿರುವ ಸ್ಥಳ, ಮೂಲಸೌಕರ್ಯ ಹಾಗೂ ಇಲಾಖೆಯ ಮುಂದಿನ ಕ್ರಮಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಪಾರ್ಕಿಂಗ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಲಭ್ಯವಿರುವ ಜಾಗ, ಪ್ರವಾಸೋದ್ಯಮ ಇಲಾಖೆಗೆ ಈಗಾಗಲೇ ಗುರುತಿಸಿರುವ ಸ್ಥಳ ಹಾಗೂ ಅಗತ್ಯ ಮೂಲಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದರು. ಪ್ರವಾಸಿ ಕ್ಷೇತ್ರದ ಅಭಿವೃದ್ಧಿಯ ಜತೆಗೆ ವಾಹನ ನಿಲುಗಡೆ ವ್ಯವಸ್ಥೆಗೂ ಆದ್ಯತೆ ನೀಡಬೇಕೆಂಬ ಅಭಿಪ್ರಾಯ ಸ್ಥಳೀಯರಿಂದ ವ್ಯಕ್ತವಾಯಿತು.
ವಿಜಯವಾಣಿಯಲ್ಲಿ ಪ್ರಕಟವಾದ ವರದಿಗೆ ತಕ್ಷಣ ಸ್ಪಂದಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದು ಸಾರ್ವಜನಿಕರ ಗಮನ ಸೆಳೆದಿದ್ದು, ಅಧಿಕಾರಿಗಳ ಭೇಟಿ ಕೇವಲ ಪರಿಶೀಲನೆಗೆ ಸೀಮಿತವಾಗದೆ ಶಾಶ್ವತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಕಾರ್ಯಕ್ಕೆ ವೇಗ ನೀಡಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
ಈ ಬಗ್ಗೆ ಮಾತನಾಡಿದ ರೂಪಾ ಅವರು, ಪ್ರವಾಸೋದ್ಯಮ ಇಲಾಖೆಗೆ ಸೇರಿದ ಪಟ್ಟಣದ ಹೊರವಲಯದಲ್ಲಿರುವ 4 ಎಕರೆ ಜಾಗದಲ್ಲಿ ಶೀಘ್ರದಲ್ಲೇ ಪಾರ್ಕಿಂಗ್ ಗೆ ವ್ಯವಸ್ಥೆ ಕಲ್ಪಿಸುವ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.