ಹೊಳೆನರಸೀಪುರದಲ್ಲಿ ವೀರಶೈವ ಲಿಂಗಾಯತ ನೌಕರರ ಸಂಘ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಮತ್ತು ನಿವೃತ್ತ ನೌಕರರಿಗೆ ಗೌರವಿಸಲಾಯಿತು. ತೋಂಟದಾರ್ಯ ಮಠದ ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿ ಸ್ವಾಮೀಜಿ, ಎಂ.ಸಿ.ಕುಮಾರಸ್ವಾಮಿ, ಬಿ.ಧರ್ಮಣ್ಣ, ಎಚ್.ಎಸ್.ಪುಟ್ಟಸ್ವಾಮಪ್ಪ, ವಸಂತಕುಮಾರ್ ಇತರರು ಇದ್ದರು.
ಹೊಳೆನರಸೀಪುರ : ನಾಡಿನ ಧರ್ಮ ಮತ್ತು ಸಂಸ್ಕೃತಿ ಉಳಿವಿಗೆ ಎಲ್ಲರೂ ಶ್ರಮಿಸಬೇಕು ಎಂದು ಮುಳ್ಳೂರಿನ ತೋಂಟದಾರ್ಯ ಮಠದ ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ವಿದ್ಯಾರ್ಥಿಗಳು ಚನ್ನಾಗಿ ಜ್ಞಾನಾರ್ಜನೆ ಮಾಡಬೇಕು. ಆಟೋಟಗಳಲ್ಲಿ ಭಾಗವಹಿಸಬೇಕು.
ಇದರೊಂದಿಗೆ ಉತ್ತಮ ಸಂಸ್ಕಾರವನ್ನೂ ರೂಢಿಸಿಕೊಳ್ಳಬೇಕು. ನಿವೃತ್ತರು ಜೀವನದ ಮುಸ್ಸಂಜೆಯಲ್ಲಿ ಸ್ವಂತ ಬದುಕಿನತ್ತ ಚಿತ್ತ ಹರಿಸದೇ ಸಮಾಜಕ್ಕೆ ಏನಾದರೂ ಬಳುವಳಿ ನೀಡುವತ್ತ ಗಮನ ಹರಿಸಬೇಕು. ಆಗ ಮಾತ್ರ ಬದುಕು ಪರಿಪೂರ್ಣವಾಗುತ್ತದೆ ಎಂದರು.
ಯಾವ ವ್ಯಕ್ತಿ ಭಾರತೀಯ ಸನಾತನ ಸಂಸ್ಕೃತಿ ಉಳಿವಿಗಾಗಿ ಶ್ರಮಿಸುತ್ತಾನೋ ಅವನಲ್ಲಿ ಸಂಸ್ಕಾರ ಮತ್ತು ನಾಯಕತ್ವದ ಗುಣ ಬೆಳೆಯುತ್ತದೆ. ಸಮಾಜ ಅವನನ್ನು ಪ್ರೀತಿಸುತ್ತದೆ. ವಿಶ್ವಾಸದ ವಲಯ ವಿಸ್ತಾರಗೊಳ್ಳುತ್ತದೆ ಎಂದರು.
ಗುರಿ ಸಾಧನೆಗೆ ಮಾಡಿ: ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ನಟೇಶ್ ಮಾತನಾಡಿ, ಪ್ರತಿಭಾನ್ವಿತ ವಿದ್ಯಾರ್ಥಿಗಳು ನಿಗದಿತ ಗುರಿ ಸಾಧನೆಗೆ ಗಮನ ಹರಿಸಬೇಕು ಎಂದರು. ಹದಿಹರೆಯದಲ್ಲಿ ಬೇಡದ ಆಲೋಚನೆ ಮತ್ತು ಆಕರ್ಷಣೆಗಳು ಬಂದರೂ ಅವುಗಳನ್ನು ಬದಿಗೊತ್ತಿ ಉತ್ತಮವಾದ ವಸ್ತು, ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಆಗ ಮಾತ್ರ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯ ಎಂದರು.
ಸಾನ್ನಿಧ್ಯ ವಹಿಸಿದ್ದ ತೇಜೂರು ಗ್ರಾಮದ ಸಿದ್ದರಾಮೇಶ್ವರ ಮಠದ ಶ್ರೀ ಕಲ್ಯಾಣ ಸ್ವಾಮೀಜಿ
ಮತ್ತು ಟಿ.ಮಾಯಗೌಡನಹಳ್ಳಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯಸ್ವಾಮೀಜಿ
ಎಸ್ಸೆಸ್ಸೆಲ್ಸಿ ಮತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಪಡೆದ ಸಮುದಾಯದ ವಿದ್ಯಾರ್ಥಿಗಳನ್ನು, ಸೇವೆಯಿಂದ ನಿವೃತ್ತಿಗೊಂಡ 40 ನೌಕರರನ್ನು ಸನ್ಮಾನಿಸಿದರು. ವೀರಶೈವ ಲಿಂಗಾಯಿತ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಸಿ.ಕುಮಾರಸ್ವಾಮಿ, ಕಾರ್ಯದರ್ಶಿ ಬಿ.ಧರ್ಮಣ್ಣ, ಜಿಡಿಎಸ್ ತಾಲೂಕು ಘಟಕ ಅಧ್ಯಕ್ಷ ಎಚ್.ಎಸ್.ಪುಟ್ಟಸ್ವಾಮಪ್ಪ, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಹಾಲಿಂಗ, ಮಾಜಿ ಅಧ್ಯಕ್ಷ ಸೋಮಣ್ಣ, ಹಿರಿಯ ವಕೀಲ ವಸಂತಕುಮಾರ್ ಮತ್ತಿತರರು ಉಪಸ್ಥಿತರಿದ್ದರು.