ಕೆಎಸ್‌ಆರ್‌ಟಿಸಿ ಚನ್ನರಾಯಪಟ್ಟಣ ಘಟಕದ ಬಸ್‌ನಲ್ಲಿ ಹಣ ಹಾಗೂ ಚೆಕ್ ಇದ್ದ ಬ್ಯಾಂಗ್ ಬಿಟ್ಟು ಹೋಗಿದ್ದ ಕಪಿಲ್ ಶರ್ಮಾ ಮತ್ತು ಬಾಲಕಿಶನ್ ಶರ್ಮಾ ಅವರಿಗೆ ಘಟಕ ವ್ಯವಸ್ಥಾಪಕ ಜ್ಞಾನೇಶ್ ಹಾಗೂ ಭದ್ರತಾ ಶಾಖೆ ಹವಾಲ್ದಾರ್ ನಾರಾಯಣ, ಚಾಲಕ ಎನ್. ಸಿ.ಕೃಷ್ಣೇಗೌಡ, ನಿರ್ವಾಹಕ ಜಗದೀಶ್ ಹಸ್ತಾಂತರಿಸಿದರು.
- ವಾರಸುದಾರರಿಗೆ 67 ಸಾವಿರ ನಗದು, ಚೆಕ್ ಇದ್ದ ಬ್ಯಾಗ್ ಹಸ್ತಾಂತರ
- ಬಸ್‌ನಲ್ಲಿ ಬಿಟ್ಟು ಹೋಗಿದ್ದ ವ್ಯಾಪಾರಸ್ಥರು
ಚನ್ನರಾಯಪಟ್ಟಣ: ಪ್ರಯಾಣದ ಮಧ್ಯೆ ಬಸ್‌ನಲ್ಲಿ 67,500 ರೂ.ನಗದು ಹಾಗೂ ಚನ್ನರಾಯಪಟ್ಟಣದ ವರ್ತಕರು ಸಹಿ ಮಾಡಿ ನೀಡಿದ 1.10 ಲಕ್ಷದ ಚೆಕ್ ಇದ್ದ ಬ್ಯಾಗ್ ಬಿಟ್ಟು ಹೋಗಿದ್ದ ಪ್ರಯಾಣಿಕನಿಗೆ ಚಾಲಕ ಮತ್ತು ನಿರ್ವಾಹಕ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಹಾರ್ಡ್‌ವೇರ್‌ಗಳಿಗೆ ಕಬ್ಬಿಣದ ಸಾಮಗ್ರಿಗಳನ್ನು ಪೂರೈಕೆ ಮಾಡುತ್ತಿದ್ದ ಕಪಿಲ್ ಶರ್ಮಾ ಮತ್ತು ಬಾಲಕಿಶನ್ ಶರ್ಮಾ ಅವರಿಗೆ ಬ್ಯಾಗ್ ನೀಡಲಾಯಿತು. ಚನ್ನರಾಯಪಟ್ಟಣದಿಂದ ಹಾಸನಕ್ಕೆ ಪ್ರಯಾಣಿಸುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚನ್ನರಾಯಪಟ್ಟಣ ಘಟಕಕ್ಕೆ ಸೇರಿದ ಬಸ್ ತಾಂತ್ರಿಕ ಸಮಸ್ಯೆಯಿಂದ ಬಸನ್ನು ದುರಸ್ತಿಗಾಗಿ ಘಟಕಕ್ಕೆ ವಾಪಸ್ ತರುವ ಉದ್ದೇಶದಿಂದ ಪ್ರಯಾಣಿಕರನ್ನು ಬೇರೆ ಬಸ್‌ನಲ್ಲಿ ಕಳುಹಿಸಲಾಯಿತು. ಬಸ್‌ನಲ್ಲಿ ಕಪಿಲ್ ಶರ್ಮಾ ಮತ್ತು ಬಾಲಕಿಶನ್ ಶರ್ಮಾ ಅವರು ಬದಲಿ ಬಸನ್ನು ಏರುವಾಗ ಚನ್ನರಾಯಪಟ್ಟಣದ ವರ್ತಕರಿಂದ ಸಂಗ್ರಹಿಸಿದ್ದ 67,500 ರೂ. ನಗದು ಹಾಗೂ 1.10 ಲಕ್ಷ ರೂ.ಮೌಲ್ಯದ ಸಹಿ ಮಾಡಿದ ಚೆಕ್ ಇರುವ ಬ್ಯಾಗ್‌ನ್ನು ಬಿಟ್ಟು ಹೋಗಿದ್ದರು.
ಬಸ್ ದುರಸ್ತಿಗಾಗಿ ಚನ್ನರಾಯಪಟ್ಟಣ ಘಟಕಕ್ಕೆ ವಾಪಸ್ ತಂದಾಗ ಬ್ಯಾಗ್ ಇರುವುದು ನಿರ್ವಾಹಕ ಜಗದೀಶ ಮತ್ತು ಚಾಲಕ ಎನ್.ಸಿ.ಕೃಷ್ಣೇಗೌಡರ ಕಣ್ಣಿಗೆ ಬಿದ್ದಿದೆ. ಬ್ಯಾಗ್ ಪರಿಶೀಲಿಸಿದ್ದಾರೆ. ಸಹಿ ಮಾಡಿದ ಖಾಲಿ ಚೆಕ್ ಹಾಗೂ ಹಣವಿರುವುದನ್ನು ಗಮನಿಸಿದ ನಿರ್ವಾಹಕ ಮತ್ತು ಚಾಲಕ ಕೂಡಲೇ ಘಟಕ ವ್ಯವಸ್ಥಾಪಕರಿಗೆ ವಿಷಯ ತಲುಪಿಸಿದ್ದಾರೆ.
ಘಟಕ ವ್ಯವಸ್ಥಾಪಕ ಜ್ಞಾನೇಶ್ ಅವರು ಬ್ಯಾಗನ್ನು ಪರಿಶೀಲಿಸಿ ಬ್ಯಾಗಿನಲ್ಲಿ ದೊರೆತ ಆಧಾರ್ ಕಾರ್ಡ್‌ನಿಂದ ದೂರವಾಣಿ ಸಂಖ್ಯೆಯನ್ನು ಪತ್ತೆ ಹಚ್ಚಿ ಅವರನ್ನು ಸಂಪರ್ಕಿಸಿದ್ದಾರೆ. ಹಣದ ಬ್ಯಾಗ್ ಕಳೆದುಕೊಂಡು ಗಾಬರಿಯಲ್ಲಿದ್ದ ಕಪಿಲ್ ಶರ್ಮಾ ಮತ್ತು ಬಾಲಕಿಶನ್ ಶರ್ಮಾ ಓಡೋಡಿ ಬಂದು ಚನ್ನರಾಯಪಟ್ಟಣ ಘಟಕವನ್ನು ಸಂಪರ್ಕಿಸಿದ್ದಾರೆ. ಘಟಕ ವ್ಯವಸ್ಥಾಪಕರು ಹಾಗೂ ಭದ್ರತಾ ಸಿಬ್ಬಂದಿ ಹಣದ ಬ್ಯಾಗನ್ನು ಮಾಲೀಕ ಕಪಿಲ್ ಶರ್ಮಾ ಮತ್ತು ಬಾಲಕಿಶನ್ ಶರ್ಮಾ ವಿಳಾಸ, ದಾಖಲೆಗಳನ್ನು ಖಚಿತಪಡಿಸಿಕೊಂಡು ಹಿಂದಿರುಗಿಸಿದ್ದಾರೆ.
ಚನ್ನರಾಯಪಟ್ಟಣ ಕಬ್ಬಿಣದ ಅಂಗಡಿಗಳಿಗೆ ಸಾಮಗ್ರಿಗಳನ್ನು ಸರಬರಾಜು ಮಾಡುತ್ತಿದ್ದರು. ಅಂಗಡಿಗಳಿಂದ ಪಡೆದ 67,500 ರೂ. ಹಾಗೂ ಸಹಿ ಮಾಡಿದ 1.10 ಲಕ್ಷ ರೂ.ಮೌಲ್ಯದ ಚೆಕ್ಕನ್ನು ಹಾಸನಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆನ್ನಲಾಗಿದೆ. ಪ್ರಾಮಾಣಿಕತೆ ಮೆರೆದ ಚಾಲಕ, ನಿರ್ವಾಹಕನಿಗೆ ಸಂಸ್ಥೆ ಮೇಲಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.