ಹೊಳೆನರಸೀಪುರ ತಾಲೂಕಿನ ಕಾಮಸಮುದ್ರ ಬಳಿ ರಾಷ್ಟ್ರೀಯ ಹೆದ್ದಾರಿಗೆ ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ಕಿತ್ತು ಹೊತ್ತೊಯ್ದಿರುವುದು.
ಹೊಳೆನರಸೀಪುರ: ತಾಲೂಕಿನ ಹಳೇ ಕೋಟೆ ಹೋಬಳಿ ಕಾಮಸಮುದ್ರ ಗ್ರಾಮದಲ್ಲಿ ಗುರುವಾರ ಮಧ್ಯರಾತ್ರಿ ಯಾರೋ ಕಿಡಿಗೇಡಿಗಳು ರಸ್ತೆ ಮಧ್ಯೆ ಅಳವಡಿಸಿದ್ದ ಕಬ್ಬಿಣದ ಬ್ಯಾರಿಕೇಡ್‌ಗಳನ್ನು ಕಿತ್ತು ಹೊತ್ತೊಯ್ದಿದ್ದಾರೆ.
ಹಾಸನ-ಮೈಸೂರು ರಾಷ್ಟ್ರೀಯ ಹೆದ್ದಾರಿ 373ರಲ್ಲಿ ಈ ಘಟನೆ ನಡೆದಿದೆ. ಕಾಮಸಮುದ್ರ ಗ್ರಾಮದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಗೆ ಮಧ್ಯಭಾಗದಲ್ಲಿ ಕಬ್ಬಿಣದ ಡಿವೈಡರ್‌ಗಳನ್ನು ಅಳವಡಿಸಲಾಗಿತ್ತು.
ರಾಷ್ಟ್ರೀಯ ಹೆದ್ದಾರಿಗೆ ಅಳವಡಿಸಿದ್ದ ಸುಮಾರು 30 ಬ್ಯಾರಿಕೇಡ್‌ಗಳನ್ನು ದುಷ್ಕರ್ಮಿಗಳು ಕಿತ್ತು ಹೊತ್ತೊಯ್ದಿದ್ದಾರೆ. ಈ ಘಟನೆಯ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಸಾರ್ವಜನಿಕರಿಗೆ ಬ್ಯಾರಿಕೇಡ್ ಅಳವಡಿಕೆಯಿಂದ ತೊಂದರೆಯಾಗಿದ್ದರೆ ಇಲಾಖೆಗೆ ದೂರು ನೀಡಬಹುದಿತ್ತು. ಅವರ ದೂರಿನ ಮೇರೆಗೆ ತೆರವುಗೊಳಿಸುವ ಕೆಲಸ ಮಾಡಲಾಗುತ್ತಿತ್ತು. ಸರ್ಕಾರದ ನಿಯಮಾವಳಿಯಂತೆ ಎಲ್ಲರೂ ನಡೆದುಕೊಳ್ಳಬೇಕಾಗಿದೆ. ಯಾರು ಕಿತ್ತು ಸಾಗಿಸಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಪೊಲೀಸ್ ತನಿಖೆಯಿಂದ ಯಾರು ಕಿತ್ತು ಹೊತ್ತೊಯ್ದಿದ್ದಾರೆ ಎಂಬುದು ತಿಳಿಯಬೇಕಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿಯ ಸಹಾಯಕ ಇಂಜಿನಿಯರ್ ಅನೀಶ್ ತಿಳಿಸಿದ್ದಾರೆ.