ಹೊಳೆನರಸೀಪುರ ತಾಲೂಕು ಕಚೇರಿ ಮುಂದೆ ದಲಿತ ಕುಟುಂಬಗಳಿಗೆ ನ್ಯಾಯ ಮತ್ತು ರಕ್ಷಣೆ ನೀಡುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ಸೋಮವಾರ ಪ್ರತಿಭಟನೆ ನಡೆಸಿದರು. 
ಹಾಸನ

ದಲಿತ ಹಕ್ಕುಗಳ ಸಮಿತಿಯಿಂದ ಪ್ರತಿಭಟನೆ

ಹೊಳೆನರಸೀಪುರ: ಪರಿಶಿಷ್ಟ ಜಾತಿ-ಪಂಗಡದವರ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವವರ ಮೇಲೆ ಕ್ರಮ ಜರುಗಿಸಿ ನೊಂದ ದಲಿತ ಕುಟುಂಬಗಳಿಗೆ ನ್ಯಾಯ ಮತ್ತು ರಕ್ಷಣೆ ನೀಡಬೇಕೆಂದು ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ಸೋಮವಾರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ತಾಲೂಕಿನ ಹಳ್ಳಿ ಮೈಸೂರು ಹೋಬಳಿಯ ಜೋಡಿಗುಬ್ಬಿ ಗ್ರಾಮದ ಕಾಳಯ್ಯ, ಚಿಕ್ಕಮ್ಮ, ಕೃಷ್ಣಪ್ಪ, ಉದ್ದೂರು ಗ್ರಾಮದ ಸಣ್ಣ ಮರಿಯಯ್ಯ, ರಾಮೇನಹಳ್ಳಿ ಗ್ರಾಮದ ವೆಂಕಟಯ್ಯ ಮತ್ತು ಜವರಯ್ಯ ಹಾಗೂ ಕೆರಗೋಡು ಗ್ರಾಮದ ಸಣ್ಣ ಲಿಂಗಯ್ಯ ಅವರಿಗೆ ಉಯ್ಯಲೆ ಗೌಡನಹಳ್ಳಿ ಸರ್ವೇ ನಂ.23 ,24 ,31 ,32 ರಲ್ಲಿ ಸರ್ಕಾರದಿಂದ ಮಂಜುರಾದ ಜಮೀನುಗಳಿದ್ದು ಅದರಲ್ಲಿ ಉಳುಮೆ ಮಾಡಿಕೊಂಡು ಅನುಭವದಲ್ಲಿದ್ದು ತಮ್ಮ ಜೀವನ ನಡೆಸುತ್ತಿದ್ದಾರೆ. ಆದರೆ ಕೆಲವರು ಇವರ ಮೇಲೆ ದಬ್ಬಾಳಿಕೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ದಲಿತ ಹಕ್ಕುಗಳ ಸಮಿತಿ ಕರ್ನಾಟಕ ರಾಜ್ಯದ ಜಿಲ್ಲಾ ಸಂಚಾಲಕ ಪೃಥ್ವಿ ಆರೋಪಿಸಿದರು.
ಜೋಡಿಗುಬ್ಬಿ ಗ್ರಾಮದ ಸುರೇಶ್, ಪ್ರಕಾಶ್, ಶಿವಣ್ಣಗೌಡ, ಹರೀಶ್, ಗಂಗಮ್ಮ, ರಾಮೇಗೌಡ ಎಂಬುವರು ದಲಿತರ ಜಮೀನನ್ನು ದಬ್ಬಾಳಿಕೆಯಿಂದ ಒತ್ತುವರಿ ಮಾಡಿಕೊಂಡು ಮಾನಸಿಕವಾಗಿ ತೊಂದರೆ ಕೊಡುತ್ತಿದ್ದಾರೆ. ಒತ್ತುವರಿ ತೆರವಿಗೆ ಕೇಳಲು ಹೋದರೆ ಹಲ್ಲೆ ಮಾಡಲು ಯತ್ನಿಸುತ್ತಾರೆ ಎಂದು ಆರೋಪಿಸಿದರು.
ಸುರೇಶ್ ಅವರು ದಲಿತರ ಜಮೀನನ್ನು ಹೆಚ್ಚಿನ ಪ್ರಮಾಣದಲ್ಲಿ ಒತ್ತುವರಿ ಮಾಡುವುದರ ಜತೆಗೆ ತನ್ನ ಕುಟುಂಬದವರೊಂದಿಗೆ ಸಣ್ಣ ನಿಂಗಯ್ಯ ಸೇರಿದ ಜಮೀನಿನಲ್ಲಿ ದನ ಕರುಗಳಿಗೆ ನಿರ್ಮಿಸಿದ್ದ ಗುಡಿಸಲಿಗೆ ಬೆಂಕಿ ಹಾಕಿ ಅವರ ಜಮೀನನ್ನು ಒತ್ತುವರಿ ಮಾಡಿ ಜೆಸಿಬಿಯಿಂದ ಕಾಲುವೆ ತೆಗೆದು ಅಕ್ರಮವಾಗಿ ಶೆಡ್ ನಿರ್ಮಾಣ ಮಾಡಿ ಸಣ್ಣ ಲಿಂಗಯ್ಯ ಅವರ ಮಗ ಪರಮೇಶ್ ಮೇಲೆ ಜಾತಿ ನಿಂದನೆ ಮಾಡಿದ್ದಾರೆ. ಈ ಬಗ್ಗೆ ಹಳ್ಳಿ ಮೈಸೂರು ಪೊಲೀಸ್ ಠಾಣೆಯಲ್ಲಿ ಹಲವು ಬಾರಿ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ದೂರಿದರು.
ದಲಿತರಿಗೆ ಮಂಜೂರಾಗಿರುವ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿರುವುದರಿಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ತೆರವುಗೊಳಿಸಿ ದಲಿತರಿಗೆ ನ್ಯಾಯ ದೊರಕಿಸಿ ಕೊಡಬೇಕು. ಅವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ದಲಿತ ಹಕ್ಕುಗಳ ಸಮಿತಿ ಕರ್ನಾಟಕ ತಾಲೂಕು ಸಂಚಾಲಕ ಸಿಗರನಹಳ್ಳಿ ರಾಜು, ಜೋಡಿಗುಬ್ಬಿ ಗ್ರಾಮದ ಜಿಕೆ ಪರಮೇಶ್, ಕೃಷ್ಣಪ್ಪ ಕರಿಯ,ರಾಮೇನಹಳ್ಳಿ ಗ್ರಾಮದ ವೆಂಕಟಯ್ಯ ದೊಡ್ಡಯ್ಯ, ಕೆರಗೋಡು ಗ್ರಾಮದ ಸಣ್ಣ ಲಿಂಗಯ್ಯ, ತಾಯಮ್ಮ ಜವರಯ್ಯ ಹುದ್ದೂರು ಗ್ರಾಮದ ಸಣ್ಣ ಮರಿಯಯ್ಯ ಚಿಕ್ಕನಹಳ್ಳಿ ರಂಗಯ್ಯ ಚಿಕ್ಕಮ್ಮ ಕಲ್ಯಾಣ ಮತ್ತಿತರರು ಇದ್ದರು.