ಹೊಳೆನರಸೀಪುರದ ಜಯಚಾಮರಾಜೇಂದ್ರ ವೃತ್ತದ ಗಾಂಧಿ ಪ್ರತಿಮೆ ಬಳಿ ಮೇಣದಬತ್ತಿ ಬೆಳಗುವ ಮೂಲಕ ಜಾನಕಿ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. 
ಹಾಸನ

ಎಸ್.ಜಾನಕಿ ನಿಧನಕ್ಕೆ ಪ್ರಗತಿಪರ ಸಂಘ, ಸಂಸ್ಥೆಗಳಿಂದ ಶ್ರದ್ಧಾಂಜಲಿ

ಹೊಳೆನರಸೀಪುರ: ಪಟ್ಟಣದ ಜಯಚಾಮರಾಜೇಂದ್ರ ವೃತ್ತದ ಗಾಂಧಿ ಪ್ರತಿಮೆ ಬಳಿ ಕಲಾವಿದರು, ನಾಗರಿಕರು, ಪ್ರಗತಿಪರ ಸಂಘ, ಸಂಸ್ಥೆಗಳು ಮತ್ತು ಎಸ್.ಜಾನಕಿ ಅಭಿಮಾನಿಗಳು ಜಾನಕಿ ಅವರ ನಿಧನಕ್ಕೆ ಮಂಗಳವಾರ ಮೇಣದಬತ್ತಿ ಹಿಡಿದು ಶ್ರದ್ಧಾಂಜಲಿ ಅರ್ಪಿಸಿದರು.
ಯಂಗ್ ಡೈಮಂಡ್ಸ್ ಮ್ಯೂಸಿಕಲ್ ಬೀಟ್ಸ್ ಆರ್ಕೆಸ್ಟ್ರಾ ತಂಡದ ಕಡವಿನಹೊಸಹಳ್ಳಿಯ ಕೆ.ಎಂ.ನಾಗರಾಜು ಮಾತನಾಡಿ, ಜಾನಕಿ ಅಮ್ಮನವರ ನಿಧನ ಭಾರತೀಯ ಚಿತ್ರರಂಗಕ್ಕೆ ದೊಡ್ಡ ನಷ್ಟ ಉಂಟು ಮಾಡಿದೆ. ಆವರ ಶರೀರ ಇಂದು ನಮ್ಮಿಂದ ದೂರಾಗಿದ್ದರೂ ಅವರ ಶಾರೀರ ಭಾರತೀಯರ ಮನೆ, ಸಂಗೀತ, ಸಾಹಿತ್ಯ, ಕಲಾವಿದರ ಗಾಯನದಲ್ಲಿ ಸದಾ ಇರುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮಗಾಯನದ ಮೂಲಕ ಭಾರತೀಯ ಸಾಂಸ್ಕೃತಿಕ ರಾಯಭಾರಿಯಾಗಿದ್ದ ಜಾನಕಿ ಅಮ್ಮನವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥಿಸಿದರು
ಜು.17ರಂದು ಸಂಜೆ 6 ಗಂಟೆಗೆ ಪಟ್ಟಣದ ಪುರಸಭೆ ಮುಂಭಾಗ ಜಾನಕಿ ಅಮ್ಮನವರಿಗೆ ಗೀತ ಗಾಯನ ನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಗತಿಪರ ಮುಖಂಡ ಜೈ ಪ್ರಕಾಶ್ ಮಾತನಾಡಿ, ಜಾನಕಿ ಅಮ್ಮನವರು ಸುಮಾರು 48,000ಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದು, ಅದರಲ್ಲಿ 10,000ಕ್ಕೂ ಅಧಿಕ ಹಾಡುಗಳನ್ನು ಕನ್ನಡದಲ್ಲಿ ಹಾಡಿರುವುದು ಹೆಮ್ಮೆಯ ಸಂಗತಿ ಎಂದರು.
ಕಲಾವಿದರಾದ ವಿದ್ಯಾ ಧನುಷ್, ಎಂ.ರಾಘು, ಅಜಿತ್ ಮುಂತಾದವರು ಹಾಡು ಹಾಡಿದರು. ನಂತರ ಜಾನಕಿ ಅಮ್ಮನವರ ಭಾವಚಿತ್ರದ ಮುಂದೆ ಮೇಣದಬತ್ತಿ ಬೆಳಗಿಸಿ ಸಂತಾಪ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ವೈ.ಚಂದ್ರಶೇಖರ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಆರ್.ಮಂಜುನಾಥ್, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಶ್, ದಲಿತ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಡಿ.ಕೆ.ವಸಂತಯ್ಯ, ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಪುಟ್ಟೇಗೌಡ, ವರ್ತಕರ ಸಂಘದ ಪದಾಧಿಕಾರಿ ಮುರಳಿಧರ ಗುಪ್ತ, ಪುರಸಭೆ ಮುಖ್ಯಾಧಿಕಾರಿ ಶಿವಶಂಕರ್, ದಲಿತ ಸಂಘರ್ಷ ಸಮಿತಿ ಮುಖಂಡರಾದ ಅತ್ನಿ ಮಹದೇವ್, ಚಿನ್ನಸ್ವಾಮಿ, ಜಗದೀಶ್ ಇತರರಿದ್ದರು.