ಕರ್ನಾಟಕ ಮೂಡಲಪಾಯ ಬಯಲಾಟ ಅಕಾಡೆಮಿಯ ಗೌರವ ಪ್ರಶಸ್ತಿಗೆ ಭಾಜನರಾದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಆರ್.ಬಿ.ಪುಟ್ಟೇಗೌಡರನ್ನು ಅಭಿನಂದಿಸಲಾಯಿತು. ಡಾ.ಚಂದ್ರು ಕಾಳೇನಹಳ್ಳಿ, ಡಿ.ಕೆ.ಕುಮಾರಯ್ಯ ಇತರರು ಇದ್ದರು.
ಹೊಳೆನರಸೀಪುರ:ಬಹುಮುಖ ಪ್ರತಿಭೆಯ ಆರ್.ಬಿ.ಪುಟ್ಟೇಗೌಡ ಅವರು ಕನ್ನಡ ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ ಎಂದು ಜಾನಪದ ತಜ್ಞ, ಹಿರಿಯ ರಂಗಭೂಮಿ ಕಲಾವಿದ ಡಾ.ಚಂದ್ರು ಕಾಳೇನಹಳ್ಳಿ ತಿಳಿಸಿದರು.
ಪಟ್ಟಣದ ಶಾರದಾ ಶಂಕರ ಸಭಾ ಭವನದಲ್ಲಿ ಗೆಳೆಯರ ಬಳಗದ ವತಿಯಿಂದ ಕರ್ನಾಟಕ ಮೂಡಲಪಾಯ ಬಯಲಾಟ ಅಕಾಡೆಮಿ ಗೌರವ ಪ್ರಶಸ್ತಿಗೆ ಭಾಜನರಾದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಆರ್.ಬಿ.ಪುಟ್ಟೇಗೌಡ ಅವರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ನಶಿಸಿ ಹೋಗುತ್ತಿರುವ ಮೂಡಲಪಾಯ ಬಯಲಾಟ ಯಕ್ಷಗಾನ ಕಲೆಯನ್ನು ಉಳಿಸಿ, ಬೆಳೆಸುವಲ್ಲಿ ಆರ್.ಬಿ.ಪುಟ್ಟೇಗೌಡ ಸಮರ್ಪಣಾ ಮನೋಭಾವದಿಂದ ದುಡಿಮೆ ಮಾಡಿ ಇಂದು ಬಯಲಾಟ ಅಕಾಡೆಮಿಯ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿ, ಪುರಸ್ಕಾರಗಳು ದೊರೆತ ನಂತರ ಕಲಾವಿದರ ಜವಾಬ್ದಾರಿ ಮತ್ತಷ್ಟು ಹೆಚ್ಚುತ್ತದೆ ಮತ್ತು ಇನ್ನು ಹೆಚ್ಚಿನ ಕಲಾ ಸೇವೆ ಮಾಡಲು ಪ್ರೋತ್ಸಾಹ ನೀಡುತ್ತದೆ ಎಂದು ತಿಳಿಸಿದರು.
ಪ್ರಾಂಶುಪಾಲ ಡಿ.ಕೆ.ಕುಮಾರಯ್ಯ ಮಾತನಾಡಿ, ತಾನು ಬೆಳೆಯುವುದರ ಜತೆಗೆ ಪಕ್ಕದಲ್ಲಿರುವವರ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಮನೋಭಾವ ಪುಟ್ಟೇಗೌಡರಲ್ಲಿ ಇರುವುದರಿಂದ ರಾಜ್ಯ ಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪುಟ್ಟೇಗೌಡರ ಸರಳತೆ, ಸಹೃದಯತೆ, ಸಾಮಾಜಿಕ ಕಾಳಜಿ, ಸಾಂಸ್ಕೃತಿಕ ಪ್ರಜ್ಞೆ ಅಭಿನಂದನೀಯ ಎಂದು ತಿಳಿಸಿದರು.
ಶ್ರೀ ಮಹಾಗಣಪತಿ ಮಹೋತ್ಸವ ಸೇವಾ ಸಮಿತಿಯ ಕಾರ್ಯಾಧ್ಯಕ್ಷ ಎಚ್.ಎಸ್.ಪುಟ್ಟಸೋಮಪ್ಪ, ಹಿರಿಯ ಕಾದಂಬರಿಕಾರ ನಾಗೇಶ್ ಕೌಂಡಿನ್ಯ, ಹಿರಿಯ ಸಾಹಿತಿ ಗುಂಜೇವು ಅಣ್ಣಾಜಪ್ಪ, ಪುರಸಭೆ ಮಾಜಿ ಅಧ್ಯಕ್ಷ ಎ.ಜಗನ್ನಾಥ್, ವಾಸವಾಂಬ ಬ್ಯಾಂಕ್ ಅಧ್ಯಕ್ಷ ಎಸ್.ಗೋಕುಲ್, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಎಚ್.ಆರ್.ಶಿವಕುಮಾರ್, ವೈ.ವಿ.ಚಂದ್ರಶೇಖರ್, ಈಶ್ವರ್, ಡಿಶ್ ಗೋವಿಂದ, ನಿಂಗೇಗೌಡ, ಆರೋಗ್ಯ ಇಲಾಖೆಯ ವಿನಯ್, ಪಟ್ಟಾಭಿ, ಶಂಕರ ನಾರಾಯಣ ಐತಾಳ್, ಸ್ಟೂಡಿಯೋ ಅಶೋಕ್, ರಾಜಮುಡಿ ಮಂಜಣ್ಣ, ವೆಂಕಟೇಶ್, ವಿ.ಎ.ಕಿಶೋರ್ ಇದ್ದರು.