ಶ್ರೀ ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಪೌರಾಣಿಕ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಸಂಸದ ಶ್ರೇಯಸ್ ಪಟೇಲ್ ಉದ್ಘಾಟಿಸಿದರು. ಮಾ.ನ.ಮಂಜೇಗೌಡ, ಜಯ್ಯಣ್ಣಗೌಡ, ಬಿ.ಎಂ.ಸಂತೋಷ್, ಗೋಪಿನಾಥ್, ಪ್ರಸನ್ನ, ಮೋಹನ್ ಕುಮಾರ್ ಇದ್ದರು.
ಬೇಲೂರು: ನಮ್ಮ ದೇಶದ ಸಂಸ್ಕೃತಿ, ಪರಂಪರೆ ಜನ ಮನಗಳಲ್ಲಿ ಜೀವಂತವಾಗಿರಲು ಪೌರಾಣಿಕ ಕಥೆಗಳು, ನಾಟಕಗಳು ಅತ್ಯಂತ ಮಹತ್ವದ್ದಾಗಿವೆ ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದರು.
ಶ್ರೀ ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಚನ್ನಕೇಶವ ಕೃಪಾ ಪೋಷಿತ ನಾಟಕ ಮಂಡಳಿಯಿಂದ ಇತ್ತೀಚೆಗೆ ದೇಗುಲ ಸಮೀಪದ ಆಯೋಜಿಸಿದ್ದ ಶಿವ ಭಕ್ತ ಚಂಡಾಸುರ ವಧೆ ಪೌರಾಣಿಕ ನಾಟಕ ಉದ್ಘಾಟಿಸಿ ಮಾತನಾಡಿದ ಅವರು, ನಾಟಕಗಳ ಮೂಲಕ ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಪೌರಾಣಿಕ ಇತಿಹಾಸವನ್ನು ಜನರಿಗೆ ತಿಳಿಸಲು ಮುಂದಾಗಿರುವ ಈ ತಂಡದ ಕಾರ್ಯ ಶ್ಲಾಘನೀಯ. ನಾಟಕವು ಭಕ್ತಿ, ನೀತಿ ಪಾಠ ಮತ್ತು ಧರ್ಮದ ಸಂದೇಶವನ್ನು ಸಮಾಜಕ್ಕೆ ತಲುಪಿಸುವ ಒಂದು ದೊಡ್ಡ ಶಕ್ತಿಯಾಗಿದೆ ಎಂದರು.
ಇಂದಿನ ಯುವ ಪೀಳಿಗೆಗೆ ಇಂತಹ ಕಾರ್ಯಕ್ರಮಗಳ ಮೂಲಕ ಪರಂಪರೆಯ ಅರಿವು ಮೂಡಿಸಿದಂತಾಗುತ್ತದೆ. ಒಂದು ಕಾಲದಲ್ಲಿ ಪ್ರತಿ ಗ್ರಾಮದಲ್ಲೂ ನಡೆಯುತ್ತಿದ್ದ ಪೌರಾಣಿಕ ನಾಟಕಗಳು ಇಂದಿನ ಆಧುನಿಕ ಯುಗದಲ್ಲಿ ಕಡಿಮೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಈ ಪರಂಪರೆ ಉಳಿಸುತ್ತಿರುವುದು ಶ್ಲಾಘನೀಯ ಎಂದರು.
ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಭಾರತೀಗೌಡ, ಎಚ್.ಪಿ.ದೇವರಾಜು, ಲಕ್ಷ್ಮಣ, ಹೆಗ್ಗಡೆ ಗೌಡ, ಸಮರ್ಥಗೌಡ, ಲಾಲಿತ್ಯ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಕಸಾಪ ಅಧ್ಯಕ್ಷ ಮಾ.ನ.ಮಂಜೇಗೌಡ, ಮಾಜಿ ಅಧ್ಯಕ್ಷ ಜಯ್ಯಣ್ಣಗೌಡ, ಬಿ.ಎಂ.ಸಂತೋಷ್, ಗೋಪಿನಾಥ್, ಪ್ರಸನ್ನ, ಮೋಹನ್ ಕುಮಾರ್, ಯಮಸಂಧಿ ಪಾಪಣ್ಣ, ರವಿ ನಾಕಲಗೋಡು ಇತರರಿದ್ದರು.