ಹೋಬಳಿಯ ತೋಟಿ ಕೊಪ್ಪಲು ಗ್ರಾಮದಲ್ಲಿ ಮಾರಮ್ಮ ದೇವಿಯ ಉತ್ಸವ ವೈಭವದಿಂದ ಭಾನುವಾರ ಜರುಗಿತು. 
ಹಾಸನ

ಮಾರಮ್ಮ ದೇವಿಯ ಅದ್ದೂರಿ ಉತ್ಸವ

ಹಿರೀಸಾವೆ: ಹೋಬಳಿ ತೋಟಿ ಕೊಪ್ಪಲು ಗ್ರಾಮದಲ್ಲಿ ಶ್ರೀಮಾರಮ್ಮ ದೇವಿಯ ಹಬ್ಬ ಭಾನುವಾರ ರಾತ್ರಿ ವೈಭವದಿಂದ ಜರುಗಿತು.
ಮುಂಜಾನೆಯೇ ದೇವಿಯ ದೇಗುಲಕ್ಕೆ ಹಸಿರು ಚಪ್ಪರ ಹಾಕಿ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು ಉತ್ಸವದ ಬೀದಿಯನ್ನು ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಲಾಗಿತ್ತು.
ದೇವಿಯನ್ನು ಒಡವೆ, ವಸ್ತ್ರಗಳಿಂದ ಅಲಂಕರಿಸಲಾಗಿತ್ತು. ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಆರಂಭಗೊಂಡಿದ್ದು ದೇವಿಗೆ ಅಭಿಷೇಕ ಜರುಗಿತು. ಭಕ್ತರು ಹಣ್ಣು-ಕಾಯಿ ಅರ್ಪಿಸಿ ಗಂಧ-ಕರ್ಪೂರ ಬೆಳಗಿಸಿದರು, ದೇವಿಯ ದರ್ಶನ ಪಡೆದರು.
ಸಂಜೆ ಮಂಗಳವಾದ್ಯದೊಂದಿಗೆ ಸಾಗಿದ ಮೆರವಣಿಗೆಯಲ್ಲಿ ಹೆಣ್ಣು ಮಕ್ಕಳು ತಂಬಿಟ್ಟಿನ ಆರತಿ ಹಿಡಿದು ದೇವಿಯ ದೇಗುಲಕ್ಕೆ ಆಗಮಿಸಿದರು. ದೇವಿಗೆ ವಿಶೇಷ ಪೂಜಾ ವಿಧಿ ವಿಧಾನಗಳು ನೆರವೇರಿದವು. ಹೆಣ್ಣು ಮಕ್ಕಳು ದೇವಿಗೆ ತಂಬಿಟ್ಟಿನ ಆರತಿ ಬೆಳಗಿಸಿದರು.
ಮಹಾ ಮಂಗಳಾರತಿ ನಂತರ ಅನ್ನದಾಸೋಹ ನಡೆಯಿತು. ಪ್ರಮುಖರಾದ ಕೃಷ್ಣೇಗೌಡ, ಮೂರ್ತಿ, ತಮ್ಮಯಣ್ಣ, ತೋಟಿ ಮಂಜು, ದೇವರಾಜು ಮತ್ತಿತರರು ಹಾಜರಿದ್ದರು.