ದಿಡಿಗ ಗ್ರಾಮದಲ್ಲಿ ಸುವರ್ಣ ಭವನದಲ್ಲಿ ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ವತಿಯಿಂದ ಆಯೋಜಿಸಿರುವ ಮೂರು ದಿನಗಳ ರಾಜ್ಯಮಟ್ಟದ ಗಾಂಧಿ ತತ್ವ ಪ್ರಣಿತ ಯುವಜನ ಶಿಬಿರವನ್ನು ಮಾಜಿ ಶಾಸಕ ಡಿ.ಆರ್.ಪಾಟೀಲ್ ಉದ್ಘಾಟಿಸಿದರು.ಡಾ.ವೂಡೇ ಪಿ.ಕೃಷ್ಣ, ಸಿ.ಎಸ್.ಪುಟ್ಟೇಗೌಡ, ಪ್ರೊ.ಜಿ.ಬಿ.ಶಿವರಾಜು, ಕೆ.ಚಂದ್ರು ಮತಿತರರಿದ್ದರು. 
ಹಾಸನ

ಗಾಂಧೀಜಿ ಕನಸಿನ ರಾಮರಾಜ್ಯ ಈಗಿನ ಅಗತ್ಯ

ಹಿರೀಸಾವೆ: ಮಹಾತ್ಮ ಗಾಂಧಿ ಅವರ ಕನಸಿನ ರಾಮರಾಜ್ಯ ಹಾಗೂ ಉತ್ತಮ ಸಮಾಜ ಸೃಷ್ಟಿಯಾಗಬೇಕಿದೆ ಎಂದು ಗದಗ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಡಿ.ಆರ್.ಪಾಟೀಲ್ ಅಭಿಪ್ರಾಯಪಟ್ಟರು.
ಹೋಬಳಿಯ ದಿಡಗ ಗ್ರಾಮದ ಸುವರ್ಣ ಭವನದಲ್ಲಿ ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ವತಿಯಿಂದ ಆಯೋಜಿಸಿರುವ ಮೂರು ದಿನಗಳ ರಾಜ್ಯಮಟ್ಟದ ಗಾಂಧಿತತ್ವ ಪ್ರಣೀತ ಯುವಜನ ಶಿಬಿರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಸದ್ಯದ ಪರಿಸ್ಥಿತಿಯಲ್ಲಿ ಸಮಾಜ ಮೊದಲಿನಂತಿಲ್ಲ, ಸ್ವಾಸ್ಥ್ಯ ಹದಗಿಟ್ಟಿದೆ. ಉತ್ತಮ ಸಂಸ್ಕೃತಿ ನಿರ್ಮಾಣವಾಗಬೇಕು, ಬದುಕು ಹಾಗೂ ನಮ್ಮ ನಡೆ ಪರಿಣಾಮಕಾರಿಯಾಗಬೇಕು. ಪ್ರತಿಭಾನ್ವಿತರಿಗೆ ಸಹಕಾರ ನೀಡಬೇಕು, ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎಂದು ತಿಳಿಸಿದರು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಮಹಾತ್ಮ ಗಾಂಧೀಜಿ ಅವರ ಆದರ್ಶ ಹಾಗೂ ತತ್ವ, ಸಂದೇಶಗಳು ಇಂದಿಗೂ ಜೀವಂತವಾಗಿವೆ. ಅವರ ಹೋರಾಟದ ಫಲವಾಗಿ ಇಂದು ನಾವು ಸ್ವತಂತ್ರರಾಗಿ ಬದುಕು ಕಟ್ಟಿಕೊಂಡಿದ್ದೇನೆ. ಈ ಭೂಮಿ ಹಾಗೂ ಪ್ರಪಂಚ ಇರುವವರೆಗೂ ಅವರ ಹೆಸರು ಶಾಶ್ವತವಾಗಿ ಉಳಿದಿರುತ್ತದೆ. ಮಹಾತ್ಮ ಗಾಂಧೀಜಿ ಅವರ ಚಿಂತನೆ ಹಾಗೂ ಸ್ವಾತಂತ್ರ ಹೋರಾಟವನ್ನು ಎಂದಿಗೂ ಮರೆಯುವಂತಿಲ್ಲ ಎಂದರು.
ಯಾವುದೇ ವ್ಯಕ್ತಿ ಯಶಸ್ಸಿನ ಮೆಟ್ಟಿಲು ಹತ್ತುವಾಗ ಹಿಂದಿರುಗಿ ನೋಡಬಾರದು, ಯಶಸ್ಸು ಕಂಡ ನಂತರ ತಾನು ನಡೆದು ಬಂದ ದಾರಿಯನ್ನು ಹಿಂದಿರುಗಿ ನೋಡುವುದನ್ನು ಮರೆಯಬಾರದು. ಒಳ್ಳೆಯ ಸ್ನೇಹಿತರು ಸಿಗಲಿಲ್ಲವಾದಲ್ಲಿ ಪುಸ್ತಕಗಳನ್ನೇ ಸ್ನೇಹಿತರನ್ನಾಗಿ ಮಾಡಿಕೊಳ್ಳಿ. ವಿಚಾರಧಾರೆಗಳಿಂದ ನೀವು ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ.ಕೃಷ್ಣ ಮಾತನಾಡಿ, ಮಹಾತ್ಮ ಗಾಂಧೀಜಿ ಅವರ ದೇಹವನ್ನು ಸುಲಭವಾಗಿ ಕೊಂದಿರಬಹುದು. ಆದರೆ ಅವರ ಆದರ್ಶಗಳು, ತತ್ವ ಸಂದೇಶಗಳು ಹಾಗೂ ವಿಚಾರಧಾರೆಗಳನ್ನು ಯಾರಿಂದಲೂ, ಎಂದಿಗೂ ಕೊಲ್ಲಲು ಸಾಧ್ಯವಿಲ್ಲ ಎಂದರು.
ಪ್ರಪಂಚದಲ್ಲಿ ಮಾನವೀಯತೆಯ ಮೌಲ್ಯ ಇರುವವರೆಗೂ ಹಾಗೂ ಗಾಂಧಿವಾದಿಗಳು ಬದುಕಿರುವವರೆಗೂ ಮಹಾತ್ಮ ಗಾಂಧೀಜಿ ಅವರ ಹೆಸರು ಹಾಗೂ ವಿಚಾರಧಾರೆಗಳು ಉಳಿಯಲಿವೆ ಎಂದರು.
ಶಿಬಿರದಲ್ಲಿ 6 ಜಿಲ್ಲೆಯ ಸುಮಾರು 160ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ, ಗಾಂಧಿ ಭವನದ ಸಲಹೆಗಾರ ಪ್ರೊ.ಜಿ.ಬಿ.ಶಿವರಾಜು, ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಕೆ.ಚಂದ್ರು, ತಾಪಂ ಮಾಜಿ ಸದಸ್ಯರಾದ ಪುಟ್ಟರಾಜು, ಎಂ.ಆರ್.ವಾಸು, ತಾಪಂ ಕಾರ್ಯನಿರ್ವಹಣಾಧಿಕಾರಿ ಹರೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಸತೀಶ್, ಇಸಿಒ ಅನಿಲ್ ಕುಮಾರ್, ದಿಡಗ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ.ಆರ್.ಮಂಜುನಾಥ್, ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ನೀಲಿಸಿದ್ದು, ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೆ.ಎಸ್.ಪ್ರಕಾಶ್, ಮಾಜಿ ಸದಸ್ಯರಾದ ಜ್ಯೋತಿಶ್, ಸೌಮ್ಯಾ ಗವೀಶ್, ಪ್ರಮುಖರಾದ ಯೋಗೇಶ್, ದಿನೇಶ್, ಉಮೇಶ್ ಬಳಗಾರ ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು.