ಹಿರೀಸಾವೆ-ಜುಟ್ಟನಹಳ್ಳಿ ಏತ ನೀರಾವರಿ ಯೋಜನೆಯಡಿ ಹಿರೀಸಾವೆ, ಮತಿಘಟ್ಟ ಹಾಗೂ ಜುಟ್ಟನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕೆರೆಗಳಿಗೆ ನೀರು ಹರಿಸದಿರುವುದನ್ನು ಖಂಡಿಸಿ ರೈತ ಸಂಘದ ಹಾಗೂ ಹಸಿರು ಸೇನೆ ಕಾರ್ಯಕರ್ತರು ಹಿರೀಸಾವೆ ಪಟ್ಟಣದ ಶ್ರೀಕಂಠಯ್ಯ ವೃತ್ತದಲ್ಲಿ ಖಾಲಿ ಬಿಂದಿಗೆಗಳನ್ನು ಪ್ರದರ್ಶಿಸಿ ಬುಧವಾರ ಪ್ರತಿಭಟನೆ ನಡೆಸಿದರು. 
ಹಾಸನ

ಕೆರೆಗಳಿಗೆ ನೀರು ಹರಿಸದಿದ್ದಕ್ಕೆ ರೈತರ ಆಕ್ರೋಶ

ಹಿರೀಸಾವೆ: ಹಿರೀಸಾವೆ-ಜುಟ್ಟನಹಳ್ಳಿ ಏತ ನೀರಾವರಿ ಯೋಜನೆಯಡಿ ಹಿರೀಸಾವೆ, ಮತಿಘಟ್ಟ ಹಾಗೂ ಜುಟ್ಟನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕೆರೆಗಳಿಗೆ ನೀರು ಹರಿಸದಿರುವುದನ್ನು ಖಂಡಿಸಿ ರೈತ ಸಂಘದ ಹಾಗೂ ಹಸಿರು ಸೇನೆ ಕಾರ್ಯಕರ್ತರು ಹಿರೀಸಾವೆ ಪಟ್ಟಣದ ಶ್ರೀಕಂಠಯ್ಯ ವೃತ್ತದಲ್ಲಿ ಖಾಲಿ ಬಿಂದಿಗೆಗಳನ್ನು ಪ್ರದರ್ಶಿಸಿ ಬುಧವಾರ ಪ್ರತಿಭಟನೆ ನಡೆಸಿದರು.
ಶ್ರೀಕಂಠಯ್ಯ ವೃತ್ತದಲ್ಲಿ ಜಮಾವಣೆಗೊಂಡ ರೈತರು ಹಾಗೂ ಗ್ರಾಮಸ್ಥರು ‘ನಮ್ಮ ನೀರು ನಮ್ಮ ಹಕ್ಕು’ಎಂಬ ಘೋಷಣೆಗಳನ್ನು ಕೂಗಿದರು. ಏತ ನೀರಾವರಿ ಮೂಲಕ ನೀರು ಕೆಲವೇ ಕೆರೆಗಳನ್ನು ತುಂಬಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದುವರೆಗೆ ಎಷ್ಟು ಕ್ಯೂಸೆಕ್ ನೀರನ್ನು ಯಾವ ಕೆರೆಗೆ ಮತ್ತು ಎರಡು ಕಡೆಯ ಕಾಲುವೆಗಳಿಗೆ ಹಂಚಲಾಗಿದೆ ತಿಳಿಯದಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಎಷ್ಟು ಮೋಟಾರ್ ಕೆಲಸ ಮಾಡುತ್ತಿವೆ. ಕಾಲುವೆ ಒಡೆದು ನೀರು ಹರಿಸಿಕೊಳ್ಳುತ್ತಿರುವ ವ್ಯಕ್ತಿಗಳ ಮೇಲೆ ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ನೀಡಬೇಕು ಎಂದು ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳನ್ನು ಪ್ರಶ್ನಿಸಿದರು.
ನೀರು ಹರಿಸುವ ವಿಷಯದಲ್ಲೂ ತಾರತಮ್ಯ ಮಾಡುತ್ತಿರುವ ಬಗ್ಗೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತರ ಪರವಾಗಿ ನಾಗರಾಜು, ಬಿ.ಎಂ.ಮಂಜುನಾಥ್, ರಘು, ಅಣ್ಣಪ್ಪಸ್ವಾಮಿ, ದಿಲೀಪ್, ನಂಜೇಗೌಡ, ರಂಗಸ್ವಾಮಿ, ನಾಗೇಶ್, ನಿಂಗೇಗೌಡ ಮತ್ತಿತರರು ಮಾತನಾಡಿದರು.
ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ರೈತರ ನಡುವೆ ಕೆಲ ಸಮಯ ಮಾತಿನ ಚಕಮಕಿಯೂ ನಡೆಯಿತು. ಮಳೆ ಇಲ್ಲದೆ ಬರ ಪರಿಸ್ಥಿತಿ ತಾಂಡವವಾಡುತ್ತಿದೆ. ಈಗಾಗಲೇ ಅಂತರ್ಜಲದ ಮಟ್ಟ ಗಣನೀಯ ಪ್ರಮಾಣದಲ್ಲಿ ಕುಸಿದಿರುವ ಪರಿಣಾಮ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ಹೀಗೆ ಮುಂದುವರಿದರೆ ಕುಡಿಯಲು ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ರೈತ ಮುಖಂಡರು ಆತಂಕ ವ್ಯಕ್ತಪಡಿಸಿದರು.
ನಂತರ ಕಾವೇರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ದೀಪು ರೈತರ ಪ್ರಶ್ನೆಗಳಿಗೆ ಉತ್ತರಿಸಿ, ಸೆ.1ರಿಂದ ನೀರು ಹರಿಸಲಾಗುತ್ತಿದೆ. 56 ಕ್ಯೂಸೆಕ್ ನೀರು ಬರುತ್ತಿದ್ದು, ಈಗ ಸುಂಡಹಳ್ಳಿ ಮತ್ತು ಹೊಸಕೊಪ್ಪಲು ಕೆರೆಗಳಿಗೆ ನೀರು ಹೋಗುತ್ತಿದೆ. ಕಾಲುವೆ ಒಡೆದು ನೀರು ತುಂಬಿಸಿಕೊಳ್ಳುತ್ತಿರುವ ರೈತರನ್ನು ಮನವೊಲಿಸುವ ಪ್ರಯತ್ನ ಮಾಡಲಾಗಿದೆ. ಈ ಯೋಜನೆಯಲ್ಲಿ ಒಂದು ಕೆರೆ ತುಂಬಿ ಕೋಡಿ ಮೂಲಕ ಮುಂದಿನ ಕೆರೆಗೆ ನೀರು ಹರಿಯಬೇಕು ಎಂದರು. ಆದರೆ ರೈತರು ಈ ಉತ್ತರಕ್ಕೆ ಸಮಾಧಾನಗೊಳ್ಳದೆ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಮುಂದಿನ ಎರಡು ದಿನಗಳ ನಂತರದಲ್ಲಿ ಮತಿಘಟ್ಟ ಕೆರೆಗೆ ನೀರು ಹರಿಸುವ ಪ್ರಯತ್ನ ಮಾಡುತ್ತೇನೆ. ಇದಕ್ಕೆ ಎಲ್ಲ ಗ್ರಾಮಗಳ ರೈತರು ಸಹಕಾರ ನೀಡಬೇಕು. ಎಲ್ಲ ಕೆರೆಗಳಿಗೆ ಶೇ.25 ನೀರು ಹರಿಸುವ ಪ್ರಯತ್ನ ಮಾಡಲಾಗುವುದು ಎಂದು ಅಧಿಕಾರಿ ಹೇಳಿದಾಗ ಶಾಂತಿಯಿಂದ ಇದ್ದ ರೈತರು ಒಮ್ಮೆಲೆ ಅವರ ಮೇಲೆ ಕೂಗಾಡಿದರು. ನಂತರ ಮುಖಂಡರು ಸಮಾಧಾನಪಡಿಸಿ ತಿಳಿಗೊಳಿಸಿದರು.
ಅಂತಿಮವಾಗಿ ನೀವೇ ಹೇಳಿರುವಂತೆ ಮುಂದಿನ ಎರಡು ದಿನಗಳಲ್ಲಿ ನಮ್ಮ ಕೆರೆಗಳಿಗೆ ನೀರು ಹರಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ ರೈತ ಮುಖಂಡರು, ಎಇಇ ದೀಪು ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರಕಾಶ್, ಬಿ.ಎನ್.ಮಂಜುನಾಥ್, ರಘು, ಬೂಕ ಕಿರಣ್, ನಾಗರಾಜು, ನಿಂಗೇಗೌಡ, ಮತಿಘಟ್ಟ ರಂಗಸ್ವಾಮಿ, ರಾಶಿಕ್ ಗೌಡ, ಮಂಜುನಾಥ್ ಮೌರ್ಯ, ಶಶಿಕುಮಾರ್, ರಾಮೇಗೌಡ, ಮಂಜು, ಕಿರಣ್ ಸೇರಿದಂತೆ ಹಿರೀಸಾವೆ, ಮತಿಘಟ್ಟ, ಜುಟ್ಟನಹಳ್ಳಿ ಹಾಗೂ ಬಾಳಗಂಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ರೈತರು ಪಾಲ್ಗೊಂಡಿದ್ದರು.