ಅಣ್ಣೇಗೌಡ ಅವರ ಜಮೀನಿನಲ್ಲಿ ಬೆಳೆದಿರುವ ಸಪೋಟಾ ಫಸಲು  
ಹಾಸನ

ಲಾಭ ತಂದುಕೊಟ್ಟ ಸಮಗ್ರ ಕೃಷಿ

ಎ. ಆರ್. ರಘುರಾಮ
ಎಚ್. ಆರ್.ನಟರಾಜ್ ಹಿರೀಸಾವೆ
ಹೋಬಳಿಯ ಚಿಕ್ಕ ಸೋರೆಕಾಯಿಪುರ ಗ್ರಾಮದ ಅಣ್ಣೇಗೌಡ (ಮೂರ್ತಿ) ಅವರು ಸಾವಯವ ಹಾಗೂ ಸಮಗ್ರ ಕೃಷಿ ಅನುಸರಿಸಿ ಹೆಚ್ಚು ಲಾಭ ಗಳಿಸುವ ಮೂಲಕ ರೈತ ಸಮುದಾಯಕ್ಕೆ ಮಾದರಿಯಾಗಿದ್ದಾರೆ.
ತಮಗಿರುವ 3 ಎಕರೆ ಜಮೀನಿನಲ್ಲಿ 100 ತೆಂಗಿನ ಮರಗಳು, 300 ಅಡಕೆ ಮರ ಹಾಕಿದ್ದಾರೆ. ಇದರೊಂದಿಗೆ ಏಲಕ್ಕಿ, ಮೆಣಸು, ಸಪೋಟ, ದಾಳಿಂಬೆ, ಸ್ಟಾರ್ ಫ್ರೂಟ್, ಬಟರ್ ಫ್ರೂಟ್, ವಾಟರ್ ಆ್ಯಪಲ್, ಸೀಬೆ, ನಿಂಬೆ ಸೇರಿದಂತೆ ವಿವಿಧ ಬಗೆಯ ಹಣ್ಣಿನ ಗಿಡಗಳನ್ನೂ ಕೃಷಿ ಮಾಡಿದ್ದಾರೆ. ಪುಟ್ಟಬಾಳೆ, ಪಚ್ಚಬಾಳೆ, ರಸಬಾಳೆ, ಬೂದುಬಾಳೆ ಹಾಗೂ ಕೆಂಪು ಸೇರಿದಂತೆ ವಿವಿಧ ಎಂಟು ತಳಿಯ ಬಾಳೆಯನ್ನು ಸಮೃದ್ಧವಾಗಿ ಬೆಳೆದಿರುವುದು ವಿಶೇಷ. ಚನ್ನರಾಯಪಟ್ಟಣವು ಬಯಲುಸೀಮೆ ಪ್ರದೇಶವಾಗಿದ್ದರೂ ಇವರ ಜಮೀನು ನೋಡಿದಾಗ ಮಲೆನಾಡಿನಲ್ಲಿ ಇದ್ದೇವೆಂದು ಭಾಸವಾಗುತ್ತದೆ.
*
ಹನಿ ನೀರಾವರಿ ವ್ಯವಸ್ಥೆ
ಅಣ್ಣೇಗೌಡ ತಮ್ಮ ಜಮೀನಿನಲ್ಲಿರುವ ಎಲ್ಲ ಬೆಳೆಗಳಿಗೂ ಹನಿ ನೀರಾವರಿ ಪದ್ಧತಿಯೊಂದಿಗೆ ಗಿಡ, ಮರಗಳು ಹಾಗೂ ಬೆಳೆಗಳಿಗೆ ನೀರು ಉಣಿಸುವ ವ್ಯವಸ್ಥೆ ಮಾಡಿದ್ದಾರೆ. ಕಳೆದ 10-12 ವರ್ಷಗಳಿಂದ ಯಾವುದೇ ರಾಸಾಯನಿಕ ಗೊಬ್ಬರ ಹಾಗೂ ಔಷಧಗಳನ್ನು ಇವರು ಬಳಸಿಲ್ಲ. ಸಾವಯವ ಕೃಷಿ ಅನುಸರಿಸಿ ಸಮೃದ್ಧ ಫಸಲು ಪಡೆಯುತ್ತಿರುವುದು ಸಾಧನೆಯಾಗಿದೆ.
ಕೃಷಿರಂಗಕ್ಕೆ ಬರುವ ಮುನ್ನ ಅಣ್ಣೇಗೌಡ ಕೊಳವೆಬಾವಿಗಳಲ್ಲಿ ಅಳವಡಿಸುವ ಸಬ್ ಮರ್ಸಿಬಲ್ ಪಂಪ್‌ಸೆಟ್‌ಗಳ ವೈಂಡಿಂಗ್ ಕೆಲಸ ಮಾಡಿಕೊಂಡಿದ್ದರು. ತಮ್ಮ ಜಮೀನಿನ ಕಡೆ ಹೆಚ್ಚು ಗಮನಹರಿಸುತ್ತಿರಲಿಲ್ಲ. ಕೃಷಿ ಕಾರ್ಯದಲ್ಲಿ ನೇರವಾಗಿ ತೊಡಗಲಾಗದೆ ಕಾರ್ಮಿಕರಿಂದ ಕೆಲಸ ಮಾಡಿಸುತ್ತಿದ್ದರು. ಕಾರ್ಮಿಕರ ಲಭ್ಯತೆ ಸೂಕ್ತವಾಗಿ ಆಗುತ್ತಿರಲಿಲ್ಲ. ಅವರಿಗೆ ಹೆಚ್ಚು ಹಣ ನೀಡಬೇಕಾಗಿತ್ತು.
ನಿರೀಕ್ಷೆಯಂತೆ ಲಾಭವೂ ಸಿಗುತ್ತಿರಲಿಲ್ಲ. ಇದರಿಂದ ಬೇಸತ್ತು ಕೃಷಿ ಚಟುವಟಿಕೆಯನ್ನೇ ಅಣ್ಣೇಗೌಡ
ಕೈ ಬಿಟ್ಟಿದ್ದರು. ಆದರೆ ವೃತ್ತಿಯೊಂದಿಗೆ ಸದಾ ರೈತರ ಒಡನಾಟ ಹೊಂದಿದ್ದ ಇವರು ಸಾವಯವ ಕೃಷಿ ಬಗ್ಗೆ ಪತ್ರಿಕೆಗಳಲ್ಲಿ ಓದಿ ಆಸಕ್ತರಾದರು. 12 ವರ್ಷಗಳ ಹಿಂದೆ ತಮ್ಮ ಜಮೀನಿನಲ್ಲಿ ಸಾವಯವ ಕೃಷಿ
ಕಾಯಕಕ್ಕೆ ಇಳಿದರು, ಭೂಮಿ ತಾಯಿ ಕೈ ಹಿಡಿದಳು. ಬಿತ್ತಿದ ಬೀಜಗಳು ಲಾಭ ನೀಡಿದವು. ನಂತರ ಅವರು ಹಿಂದಿರುಗಿ ನೋಡಲೇ ಇಲ್ಲ. ಸಾವಯವ ಹಾಗೂ ಸಮಗ್ರ ಕೃಷಿ ಅನುಸರಿಸುವ ಮೂಲಕ ತಾಲೂಕಿನಲ್ಲಿ ಒಬ್ಬ ಮಾದರಿ ರೈತ ಎನಿಸಿದ್ದಾರೆ.
*
ವರ್ಷ ಕಳೆದಂತೆ ದೊರಕಿದ ಲಾಭ
ಸಾವಯವ ಹಾಗೂ ಸಮಗ್ರ ಕೃಷಿ ಅನುಸರಿಸಿದ ಪ್ರಾರಂಭದಲ್ಲಿ ಅವರಿಗೆ ಹೆಚ್ಚು ಲಾಭ ಸಿಗುತ್ತಿರಲಿಲ್ಲ. ಆದರೆ ವರ್ಷಗಳು ಕಳೆದಂತೆ ನಿರೀಕ್ಷೆಯಂತೆ ಲಾಭ ಸಿಗಲು ಪ್ರಾರಂಭವಾಯಿತು. ಎಲ್ಲ ಬೆಳೆಗಳಿಂದ ವಾರ್ಷಿಕವಾಗಿ ಖರ್ಚು, ವೆಚ್ಚ ಕಳೆದು 5 ಲಕ್ಷ ರೂ.ವರೆಗೂ ಆದಾಯ ಸಿಗುತ್ತಿದೆ ಎನ್ನುತ್ತಾರೆ ಕೃಷಿಕ ಮೂರ್ತಿ.
ಮನೆಯ ಮುಂಭಾಗದಲ್ಲಿ ಸುಮಾರು 3 ಗುಂಟೆ ಜಾಗದಲ್ಲಿ ಕೈ ತೋಟ ಮಾಡಿಕೊಂಡು ಮನೆಗೆ ಬೇಕಾಗುವಷ್ಟು ಸೊಪ್ಪು ಹಾಗೂ ತರಕಾರಿಗಳನ್ನು ಬೆಳೆದು ಉಪಯೋಗಿಸುತ್ತಾರೆ.
*
ಹೈನುಗಾರಿಕೆ
ಅಣ್ಣೇಗೌಡ ಕೃಷಿಯೊಂದಿಗೆ ಹೈನುಗಾರಿಕೆಯನ್ನೂ ಮಾಡಿ ಅದರಲ್ಲೂ ಯಶ ಕಂಡಿದ್ದಾರೆ. 3 ಎಮ್ಮೆಗಳು, ನಾಲ್ಕು ನಾಟಿ ಹಸುಗಳನ್ನು, ಇದರೊಂದಿಗೆ 25ಕ್ಕೂ ಹೆಚ್ಚು ಮೇಕೆಗಳನ್ನು ಸಾಕಿದ್ದಾರೆ. ಹೈನುಗಾರಿಕೆಯಿಂದ ಅವರು ಲಾಭ ಗಳಿಸಿದ್ದಾರೆ. ತಮ್ಮ ಜಮೀನಿಗೆ ಸಾಕಾಗುವಷ್ಟು ಕೊಟ್ಟಿಗೆ ಗೊಬ್ಬರವನ್ನು ಪಡೆಯುತ್ತಿದ್ದಾರೆ. ಅನಿವಾರ್ಯವಾದರೆ ವರ್ಷದಲ್ಲಿ ಒಂದೆರಡು ಬಾರಿ ಬೇರೆ ರೈತರಿಂದ ತಿಪ್ಪೆ ಗೊಬ್ಬರ ಖರೀದಿಸಿ ಬೆಳೆಗಳಿಗೆ ನೀಡುವ ವ್ಯವಸ್ಥೆ ಮಾಡಿಕೊಂಡಿದ್ದಾರೆ.
*
ಇಳುವರಿ ಹೆಚ್ಚಳ
ಕಳೆದ ಹತ್ತು ವರ್ಷಗಳ ಹಿಂದೆ ಯಾವುದೇ ಬೆಳೆಗಳಿಂದ ಹೆಚ್ಚು ಲಾಭ ಸಿಗುತ್ತಿರಲಿಲ್ಲ. ಆದರೆ ಸಾವಯುವ ಕೃಷಿಯನ್ನು ಸಂಪೂರ್ಣ ಅನುಸರಿಸಿದ ನಂತರ ಎಲ್ಲ ಬೆಳೆಗಳಲ್ಲಿಯೂ ಹೆಚ್ಚಿನ ಇಳುವರಿಯೊಂದಿಗೆ ಸಾಕಷ್ಟು ಲಾಭ ಸಿಗುತ್ತಿದೆ ಎಂದು ರೈತ ಅಣ್ಣೇಗೌಡ ಹೇಳುತ್ತಾರೆ. ಸಾವಯವ ಕೃಷಿ ಅನುಸರಿಸುವ ಮೊದಲು 140 ಕೆಜಿ ಕೊಬ್ಬರಿ ಸಿಗುತ್ತಿತ್ತು. ಆದರೆ ಸಾವಯವ ಕೃಷಿ ಅನುಸರಿಸಿದ ಬಳಿಕ 185 ಕೆಜಿ ವರೆಗೂ ಕೊಬ್ಬರಿ ಇಳುವರಿ ಸಿಗುತ್ತಿದೆ. ಇನ್ನು ತೋಟದಲ್ಲಿ ಇರುವ ಏಲಕ್ಕಿ, ಮೆಣಸು ಹಾಗೂ ಹಣ್ಣಿನ ಗಿಡಗಳಿಂದ ಆಯಾ ಕಾಲಘಟ್ಟದಲ್ಲಿ ಸಾಕಷ್ಟು ಆದಾಯ ಸಿಗುತ್ತಿದೆ ಎಂದು ತಿಳಿಸಿದರು.
ಮೇಕೆಗಳಿಗೆ ಬೇಡಿಕೆ ಇದೆ:
ಸಾವಯವ ಕೃಷಿ, ಹೈನುಗಾರಿಕೆಯೊಂದಿಗೆ ಅಣ್ಣೇಗೌಡ ಮೇಕೆಗಳನ್ನು ಸಾಕುವ ಉಪ ಕಸುಬು ಮಾಡಿಕೊಂಡಿದ್ದಾರೆ. ಇದರಲ್ಲೂ ಸಾಕಷ್ಟು ಲಾಭಗಳಿಸಿ ಯಶಸ್ವಿಯಾಗಿದ್ದಾರೆ. ಜಮೀನಿನ ಮಧ್ಯ ಭಾಗದಲ್ಲಿ ಶೆಡ್ ನಿರ್ಮಾಣ ಮಾಡಿಕೊಂಡು 25ಕ್ಕೂ ಹೆಚ್ಚು ಮೇಕೆಗಳನ್ನು ಸಾಕಿದ್ದಾರೆ. ವರ್ಷದಲ್ಲಿ ಎರಡು, ಮೂರು ಬಾರಿ ಹಬ್ಬ ಹರಿದಿನಗಳ ಸಂದರ್ಭ ಮೇಕೆಗಳಿಗೆ ಉತ್ತಮ ಬೇಡಿಕೆ ಸಿಗಲಿದೆ. ನಿರೀಕ್ಷೆಯಂತೆ ಲಾಭವೂ ದೊರಕುತ್ತಿದೆ. ಮೇಕೆಗಳಿಂದ ದೊರಕುವ ಸಗಣಿಯು ಉತ್ತಮ ಗೊಬ್ಬರವಾಗಿದೆ.
ಉತ್ತಮ ರೈತ ಪ್ರಶಸ್ತಿ: ಸರ್ಕಾರವು ಕೃಷಿ ಇಲಾಖೆ ಮೂಲಕ ನೀಡುವ ಕೃಷಿ ಪಂಡಿತ, ಉತ್ತಮ ರೈತ ಪ್ರಶಸ್ತಿ ಇವರಿಗೆ ದೊರಕಿದೆ. ಚನ್ನರಾಯಪಟ್ಟಣ ಕೃಷಿ ಇಲಾಖೆ ಆವರಣದಲ್ಲಿ ನಡೆದ ರೈತ ದಿನಾಚರಣೆ ಸಂದರ್ಭ ಅವರನ್ನು ಗೌರವಿಸಲಾಗಿದೆ. ವಿವಿಧ ಸಂಘ, ಸಂಸ್ಥೆಗಳೂ ಅವರನ್ನು ಸನ್ಮಾನಿಸಿವೆ.
**
ಸಾವಯವ ಹಾಗೂ ಸಮಗ್ರ ಕೃಷಿ ಅನುಸರಿಸಿದರೆ ಮಣ್ಣಿನ ಆರೋಗ್ಯದ ಜತೆಗೆ ಮನುಷ್ಯನ ಆರೋಗ್ಯವು ಸುಧಾರಣೆ ಕಾಣಲಿದೆ. ಪ್ರಾರಂಭದಲ್ಲಿ ಸಮಸ್ಯೆಯಾದರೂ ನಂತರದ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ. ಸಾವಯವ ಕೃಷಿ ಅನುಸರಿಸಿದ ನಂತರ ನಿರೀಕ್ಷೆಯಂತೆ ಲಾಭ ಕಂಡಿದ್ದೇನೆ.
ಅಣ್ಣೇಗೌಡ
ಸಾವಯವ ಕೃಷಿಕ, ಚಿಕ್ಕ ಸೋರೆಕಾಯಿಪುರ
*
ಇತ್ತೀಚಿನ ದಿನಗಳಲ್ಲಿ ಸಾವಯವ ಹಾಗೂ ಸಮಗ್ರ ಕೃಷಿಯತ್ತ ಹಲವು ರೈತರು ಮುಖ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಇದಕ್ಕೆ ಪೂರಕವಾಗಿ ಸರ್ಕಾರವು ಯೋಜನೆಗಳನ್ನು ರೂಪಿಸುವುದರ ಜತೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದರೆ ಸಾವಯವ ಹಾಗೂ ಸಮಗ್ರ ಕೃಷಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬಹುದು.
ತುಳಸಿರಾಜ್
ರೈತ ಸಲಹೆಗಾರ, ಕರಿಕ್ಯಾತನಹಳ್ಳಿ
.