ಹಿಂದೂ ಸಮಾಜೋತ್ಸವ ಆಚರಣಾ ಸಮಿತಿಯಿಂದ ಶ್ರೀ ಚನ್ನಕೇಶವಸ್ವಾಮಿ ದೇಗುಲ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಯಸಳೂರಿನ ತೆಂಕಲಗೂಡು ಬೃಹನ್ಮಠದ ಶ್ರೀ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. 
ಹಾಸನ

ಬೇಲೂರಿನಲ್ಲಿ ಹಿಂದೂ ಸಮಾಜೋತ್ಸವ ಶೋಭಾಯಾತ್ರೆ

ಬೇಲೂರು: ತಾಲೂಕು ಹಿಂದೂ ಸಮಾಜೋತ್ಸವ ಆಚರಣಾ ಸಮಿತಿಯಿಂದ ಬೇಲೂರು ಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಬೃಹತ್ ಶೋಭಾಯಾತ್ರೆಯೂ ಸಾವಿರಾರು ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಪಟ್ಟಣದ ಬಸವೇಶ್ವರ ವೃತ್ತದಿಂದ ಪ್ರಾರಂಭವಾದ ಶೋಭಾಯಾತ್ರೆಯೂ ಭಜನೆ, ವಾದ್ಯ ಮೇಳ ಹಾಗೂ ಕೇಸರಿ ಧ್ವಜಗಳೊಂದಿಗೆ ನಗರಾದ್ಯಂತ ಭಕ್ತಿ ಮತ್ತು ಸಂಭ್ರಮದ ವಾತಾವರಣ ಸೃಷ್ಟಿಸಿತು. ನೂರಾರು ಮಹಿಳೆಯರು ಪೂರ್ಣಕುಂಭ ಕಳಸದೊಂದಿಗೆ ಮೆರವಣಿಗೆಯಲ್ಲಿ ಸಾಗಿದರು. ಶೋಭಾಯಾತ್ರೆಯಲ್ಲಿ ವಿವಿಧ ಮಠಾಧೀಶರು, ಧಾರ್ಮಿಕ ಮುಖಂಡರು, ಸಮಾಜದ ಗಣ್ಯರು, ಯುವಕರು ಹಾಗೂ ಮಕ್ಕಳು, ಮಹಿಳೆಯರು ಭಾಗವಹಿಸಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶಾಸಕ ಎಚ್.ಕೆ.ಸುರೇಶ್ ದಂಪತಿ ಗೋ ಪೂಜೆ ನೆರವೇರಿಸಿದರು. ಶಾಸಕರೊಂದಿಗೆ ಗಣ್ಯರು ಭಾರತಾಂಬೆ ಭಾವಚಿತ್ರಕ್ಕೆ ಪುಷ್ಪ ನಮನದ ಮೂಲಕ ಗೌರವ ಸಲ್ಲಿಸಿದರು.
ಹಿಂದೂ ಸಮಾಜೋತ್ಸವದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಯಸಳೂರಿನ ತೆಂಕಲಗೂಡು ಬೃಹನ್ಮಠದ ಶ್ರೀ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಿಂದೂ ಸಮಾಜ ಸಂಘಟಿತವಾಗಿ ನಮ್ಮ ಸಂಸ್ಕೃತಿ, ಧರ್ಮ ಹಾಗೂ ರಾಷ್ಟ್ರೀಯ ಮೌಲ್ಯಗಳನ್ನು ಉಳಿಸಿಕೊಳ್ಳಬೇಕಿದೆ. ಹಿಂದೂ ಧರ್ಮದ ಇತಿಹಾಸ ಮತ್ತು ಅದರ ಮೇಲಾದ ದಾಳಿಗಳನ್ನು ಸ್ಮರಿಸಿದ ಅವರು, ಭಕ್ತಿ ಹಾಗೂ ಶಕ್ತಿಯನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಧರ್ಮಕ್ಕೆ ನಮ್ಮ ಅಗತ್ಯವಿಲ್ಲ. ಆದರೆ ನಮಗೆ ಧರ್ಮದ ಅಗತ್ಯವಿದೆ. ನಮ್ಮ ಪೂರ್ವಜರು ಧರ್ಮ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಆ ತ್ಯಾಗದ ಫಲವಾಗಿ ನಾವಿಂದು ಸ್ವತಂತ್ರವಾಗಿ ಬದುಕುತ್ತಿದ್ದೇವೆ ಎಂದರು.
1925ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆಯಾಗದಿದ್ದರೆ ಹಿಂದೂ ಧರ್ಮವನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ಛತ್ರಪತಿ ಶಿವಾಜಿ ಮಹಾರಾಜರು, ಸುಭಾಷ್ ಚಂದ್ರ ಬೋಸ್, ಭಗತ್‌ಸಿಂಗ್, ಸಂಗೊಳ್ಳಿ ರಾಯಣ್ಣನಂತಹ ಮಹಾನ್ ಹೋರಾಟಗಾರರ ಕುರಿತು ಮಕ್ಕಳಿಗೆ ತಿಳಿಸಬೇಕಿದೆ. ಕೇವಲ ಕೇಸರಿ ಶಾಲು ಧರಿಸುವುದರಿಂದ ಧರ್ಮ ಉಳಿಯದು. ಅದು ಮನಸ್ಸು ಮತ್ತು ನಡೆ ನುಡಿಯಲ್ಲಿರಬೇಕು. ಭಕ್ತಿ ಆಚರಣೆಯಲ್ಲಿ ವ್ಯಕ್ತವಾಗಬೇಕು. ಹನುಮ ಜಯಂತಿಯಂತಹ ಹಬ್ಬಗಳನ್ನು ಭಕ್ತಿಯಿಂದ ಆಚರಿಸಬೇಕು, ಅಶಿಸ್ತು ಆಚರಣೆಗಳು ಹಿಂದೂ ಸಂಪ್ರದಾಯವಲ್ಲ ಎಂದರು.
ಸಾಮಾಜಿಕ ಚಿಂತಕ ಮಹಿಪಾಲ್ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ದೇಶಾದ್ಯಂತ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಜಗತ್ತಿನ ಅತ್ಯಂತ ಪ್ರಾಚೀನ ಹಾಗೂ ಏಕೈಕ ಸನಾತನ ಧರ್ಮ ಹಿಂದೂ ಧರ್ಮವಾಗಿದ್ದು, ಇದರಲ್ಲಿ ಹುಟ್ಟಿರುವುದು ನಮ್ಮ ಪುಣ್ಯ. ಋಷಿ ಮುನಿಗಳ ತಪಸ್ಸು, ಯೋಗ ಹಾಗೂ ಸಂಕಲ್ಪದಿಂದ ಉದ್ಭವಿಸಿದ ಧರ್ಮವೇ ಹಿಂದೂ ಧರ್ಮ ಎಂದರು.
ಶಾಸಕ ಎಚ್.ಕೆ.ಸುರೇಶ್, ಹಿಂದೂ ಸಮಾಜೋತ್ಸವ ನಿರ್ವಾಹಣಾ ಸಮಿತಿ ತಾಲೂಕು ಅಧ್ಯಕ್ಷ ರೇಣುಕುಮಾರ್, ಗೌರವಾಧ್ಯಕ್ಷ ಕೆ.ಪಿ.ಶೈಲೇಶ್, ನಗರಾಧ್ಯಕ್ಷ ಭರತ್, ಉಪಾಧ್ಯಕ್ಷ ಶಿವರಾಜ್, ಮುಖಂಡರಾದ ಎಚ್.ಎಂ.ದಯಾನಂದ್, ಡಾ.ನಾರಾಯಣಸ್ವಾಮಿ, ಅನಂತ ಸುಬ್ಬರಾಯ, ನಾಗೇಶ್, ಮೋಹನ್, ಜಿ.ಕೆ.ಕುಮಾರ್, ರಮೇಶ್ ಸುವರ್ಣ, ಶ್ರೀವತ್ಸ, ಮಲ್ಲಿಕಾರ್ಜುನ ಇತರರಿದ್ದರು.