ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ‘ಸಂಘ ಶತಾಬ್ದಿ’ ಅಂಗವಾಗಿ ನಗರದಲ್ಲಿ ಹಿಂದೂ ಸಮಾಜೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. 
ಹಾಸನ

ವಿಜೃಂಭಣೆಯಿಂದ ಜರುಗಿದ ಹಿಂದೂ ಸಮಾಜೋತ್ಸವ

ಪ್ರಮುಖ ಮುಖ್ಯಾಂಶಗಳು

  • ವಿಜೃಂಭಣೆಯಿಂದ ಜರುಗಿದ ಹಿಂದೂ ಸಮಾಜೋತ್ಸವ
  • ಸಂಘದ ನೂರನೇ ವರ್ಷದ ‘ಸಂಘ ಶತಾಬ್ದಿ’
ಹಾಸನ: ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ‘ಸಂಘ ಶತಾಬ್ದಿ’ ಅಂಗವಾಗಿ ನಗರದಲ್ಲಿ ಹಿಂದೂ ಸಮಾಜೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ನಗರದ ವಾಣಿವಿಲಾಸ ಶಾಲೆ ಆವರಣದಿಂದ ಬುಧವಾರ ಬೈಕ್ ಜಾಥಾ ಆರಂಭವಾಗಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅರಳೀಕಟ್ಟೆ ವೃತ್ತದವರೆಗೆ ಸಾಗಿತು.
ಜಾಥಾದ ವೇಳೆ ದೇಶಭಕ್ತಿ ಘೋಷಣೆಗಳು ಮೊಳಗಿದವು.
ಆಲೂರು ತಾಲೂಕು ಶ್ರೀಮದ್ ರಂಭಾಪುರಿ ಶಾಖಾ ಸಂಸ್ಥಾನ, ಕಾರ್ಜುವಳ್ಳಿ ಮಠದ ಶ್ರೀಸದಾಶಿವ ಶಿವಾಚಾರ್ಯ ಸ್ವಾಮೀಜಿ ಅವರನ್ನು ವಾದ್ಯಗೋಷ್ಠಿಯೊಂದಿಗೆ ಮಹಿಳೆಯರು ಕಳಸ ಹೊತ್ತು ಸಾಂಪ್ರದಾಯಿಕವಾಗಿ ಸ್ವಾಗತಿಸಿದರು.
ಶ್ರೀಸದಾಶಿವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅಕ್ರಮವಾಗಿ ದೇಶ ಪ್ರವೇಶಿಸುವ ಪ್ರಕರಣಗಳು ಖಂಡನೀಯವಾಗಿದ್ದು, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ತಮ್ಮ ವೈಯಕ್ತಿಕ ಅಭಿಪ್ರಾಯ.
ರಾಷ್ಟ್ರಭಾವ ಜಾಗೃತಿ, ಭಾರತದ ಅಖಂಡತೆ ಕಾಪಾಡುವುದು ಹಾಗೂ ಸನಾತನ ಧರ್ಮದ ಮೌಲ್ಯಗಳನ್ನು ಸಮಾಜದಲ್ಲಿ ಬಲಪಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ದೇಶದ ನಾನಾ ಭಾಗಗಳಲ್ಲಿ ಹಿಂದೂ ಸಮಾಜೋತ್ಸವದ ಮೂಲಕ ಏಕತಾ ಸಂದೇಶ ಸಾರಲಾಗುತ್ತಿದೆ. ಸನಾತನ ಸಂಸ್ಕೃತಿಯ ವಿವಿಧ ಒಳಪಂಗಡಗಳು ಪರಸ್ಪರ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ನಡೆದುಕೊಳ್ಳಬೇಕು. ಸಮಾಜದಲ್ಲಿ ಏಕತಾಭಾವನೆ ಬಲವಾದಾಗ ಮಾತ್ರ ರಾಷ್ಟ್ರ ಶಕ್ತಿಶಾಲಿಯಾಗುತ್ತದೆ. ಭಾರತ ದೇಶದ ಶಾಂತಿ, ಭದ್ರತೆ ಮತ್ತು ಅಖಂಡತೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಅಕ್ರಮವಾಗಿ ದೇಶ ಪ್ರವೇಶಿಸುವ ಪ್ರಕರಣಗಳು ಖಂಡನೀಯವಾಗಿದ್ದು, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಶ್ರೀ ಸಾಯಿಬಾಬಾ ಮಂದಿರದಿಂದ ಸಂಕೀರ್ತನಾ ಯಾತ್ರೆ ನಡೆಯಿತು. ಸುನಾದ ಸಂಗೀತ ಮತ್ತು ಗಮಕ ಶಾಲೆಯ ವಿದ್ಯಾರ್ಥಿಗಳಿಂದ ಭಕ್ತಿ ಸಂಗೀತ ಕಾರ್ಯಕ್ರಮ, ಅಂಬಳೆ ರಾಜೇಶ್ವರಿ ಅವರ ಶಿಷ್ಯರಾದ ಲಕ್ಷ್ಮೀರಾಜೇಶ್ ತಂಡದಿಂದ ಭರತನಾಟ್ಯ ಪ್ರದರ್ಶನ ಪ್ರೇಕ್ಷಕರ ಮನಗೆದ್ದಿತು. ಮೆರವಣಿಗೆಯ ಸಂದರ್ಭದಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸಲಾಯಿತು.
ಹಿಂದೂ ಸಮಾಜೋತ್ಸವ ಸಮಿತಿ ಅಧ್ಯಕ್ಷ ಶೋಭನ್‌ಬಾಬು, ಉಪಾಧ್ಯಕ್ಷ ಬಾಲಾಜಿ, ಪುಟ್ಟಸ್ವಾಮಿ, ಸುಮಾ, ಶಿವಾಜಿ ರಾಜಪುರೋಹಿತ್, ಎಚ್.ಬಿ.ಪ್ರಣವ ಭಾರದ್ವಾಜ್, ಶಾಂತಕುಮಾರ್, ವೇಣುಗೋಪಾಲ್, ಮದನ್, ಸುರೇಶ್, ಹೇಮಂತ್, ಮಂಜು, ಪ್ರತೀಕ್, ಲೋಕೇಶ್, ರಕ್ಷಿತ್ ಭಾರದ್ವಾಜ್, ವೇದವತಿ, ಚಂದ್ರು, ಶಶಾಂಕ್, ಯತೀಶ್, ಟಿ.ಎಚ್.ಚಂದ್ರಶೇಖರ್, ಸತ್ಯಪ್ರಸಾದ್, ರಾಜೀವ್ ಇತರರಿದ್ದರು.