ತಾಲೂಕಿನ ಉತ್ತೊಳಲು ಎಸ್ಟೇಟ್ ಆವರಣದಲ್ಲಿ ನೇಚರ್ ಕನ್ಸರ್‌ವೇಷನ್ ಫೌಂಡೇಶನ್ ಹಾಗೂ ಅರಣ್ಯ ಇಲಾಖೆ ಸಹಯೋಗದೊಂದಿಗೆ ಕಾಡಾನೆಗಳ ಮತ್ತು ಜನರ ಹೊಂದಾಣಿಕೆ ಬಗ್ಗೆ ಜನರಲ್ಲಿ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಲಾಯಿತು.
- ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್ ಮನವಿ
- ಬೀದಿ ನಾಟಕ ಪ್ರದರ್ಶನ
ಬೇಲೂರು: ಬೆಲೆ ಕಟ್ಟಲಾಗದ ಮನುಷ್ಯರ ಪ್ರಾಣ ಅಮೂಲ್ಯವಾದದ್ದು, ಕಾಡಾನೆಗಳಿಂದ ನಡೆಯಬಹುದಾದ ಸಂಘರ್ಷ ನಿಯಂತ್ರಿಸಲು ನಮ್ಮೊಂದಿಗೆ ಸಹಕರಿಸಿ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್ ಹೇಳಿದರು.
ತಾಲೂಕಿನ ಅರೇಹಳ್ಳಿ ಹೋಬಳಿಯ ಉತ್ತೊಳಲು ಎಸ್ಟೇಟ್ ಆವರಣದಲ್ಲಿ ನೇಚರ್ ಕನ್ಸರ್‌ವೇಷನ್ ಫೌಂಡೇಶನ್ ಮೈಸೂರು ಹಾಗೂ ಅರಣ್ಯ ಇಲಾಖೆ ಸಹಯೋಗದೊಂದಿಗೆ ಇತ್ತೀಚೆಗೆ ಆಯೋಜಿಸಿದ್ದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಾಡಾನೆಗಳ ಮತ್ತು ಜನರ ಹೊಂದಾಣಿಕೆ ಬಗ್ಗೆ ಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮನುಷ್ಯರ ಪ್ರಾಣಕ್ಕೆ ಬೆಲೆ ಕಟ್ಟಲಾಗದು. ಕಳೆದು ಕೊಂಡ ಪ್ರಾಣ ಮತ್ತೆಂದೂ ಸಿಗದು. ಹಾಗಾಗಿ ನಮ್ಮ ಜೀವ ಕಾಪಾಡಿಕೊಳ್ಳಲು ನಾವು ಜಾಗೃತಿ ಹೊಂದುವುದು ಅತ್ಯವಶ್ಯಕ. ಜೀವನಕ್ಕಾಗಿ ಮತ್ತು ಒಂದಿಷ್ಟು ಹಣ ಸಂಪಾದಿಸಲು ಊರು ಬಿಟ್ಟು ಇಲ್ಲಿಗೆ ವಲಸೆ ಬಂದಿದ್ದೀರಾ, ನಿಮ್ಮ ಪ್ರಾಣ ನಮಗೂ ಮುಖ್ಯ, ಹಾಗಾಗಿ ತೋಟ, ಗದ್ದೆಗಳಲ್ಲಿ ಕೆಲಸಕ್ಕೆ ತೆರಳುವ ಮೊದಲು ಕಾಡಾನೆಗಳ ಚಲನ ವಲನಗಳ ಬಗ್ಗೆ ನಮ್ಮ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಳ್ಳಬೇಕು. ನಿಮ್ಮ ಬಳಿ ಇಟಿಎಫ್ ತುರ್ತು ಸಹಾಯವಾಣಿ ಸಂಖ್ಯೆ ಇಟ್ಟುಕೊಳ್ಳಬೇಕು. ಒಂದು ವೇಳೆ ನಿಮ್ಮ ಪರಿಸರದಲ್ಲಿ ಕಾಡು ಪ್ರಾಣಿಗಳ ಬಗ್ಗೆ ಸುಳಿವು ಸಿಕ್ಕಲ್ಲಿ ಸಿಬ್ಬಂದಿಗೆ ತಿಳಿಸಬೇಕು. ಕಾಡುಪ್ರಾಣಿಗಳು ಕಾಡನ್ನು ತೊರೆದು ಊರಿಗೆ ಬರಲು ಕಾರಣಗಳೇನು? ಕಾಡು ಪ್ರಾಣಿಗಳಿಂದ ಹೇಗೆ ರಕ್ಷಿಸಿಕೊಳ್ಳುವುದು? ಕಾಡಾನೆಗಳನ್ನು ಕಂಡೊಡನೆ ಹೇಗೆ ಎಚ್ಚರ ವಹಿಸಬೇಕು ಮತ್ತು ಕಾಡಾನೆ ಮಾನವ ಸಂಘರ್ಷ ನಿಯಂತ್ರಿಸಲು ಅರಣ್ಯ ಇಲಾಖೆ ಯಾವ ರೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುತ್ತಿವೆ ಎಂಬುವುದರ ಬಗ್ಗೆ ಎಐ ಆಧಾರಿತ ವಿಡಿಯೋ ಪ್ರದರ್ಶನ ಹಾಗೂ ಬೀದಿ ನಾಟಕದ ಮೂಲಕ ನೆರೆದಿದ್ದವರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ನೇಚರ್ ಕನ್ಸರ್‌ವೇಷನ್ ಫೌಂಡೇಶನ್ ಹಿರಿಯ ವಿಜ್ಞಾನಿ ಆನಂದ್ ಕುಮಾರ್, ಕ್ಷೇತ್ರ ಸಂಯೋಜಕ ದೀಪಕ್ ಭಟ್, ಯೋಜನಾ ಸಂಯೋಜಕ ನಿಸಾರ್ ಅಹಮದ್, ಅರಣ್ಯ ಇಲಾಖೆಯ ಎಸಿಎಫ್ ಮೋಹನ್, ಮಧುಸೂದನ್, ಆರ್‌ಎಫ್‌ಓ ಯತೀಶ್, ಪೃಥ್ವಿ ಟ್ರಸ್ಟನ ಯೋಗನಂದ, ಮಾದೇಸ್ವಾಮಿ, ಕುಮಾರ್, ಸ್ವಪ್ನ, ಸಿಂಚನ, ಅನುಶ್ರೀ ಸೇರಿದಂತೆ ಇತರರಿದ್ದರು.