ಕಲಬೆರಕೆ ಬೆಣ್ಣೆ ಮಾರಾಟದ ದೂರಿನ ಹಿನ್ನೆಲೆಯಲ್ಲಿ ಮಂಗಳವಾರ ಶ್ರವಣಬೆಳಗೊಳದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿತು. ಟಿ.ಎಚ್.ಹರೀಶ್, ಶರತ್, ಮೋಹನ್, ಅಚಲ್ ಇದ್ದರು.
ಶ್ರವಣಬೆಳಗೊಳ: ಕಲಬೆರಕೆ ಹಾಗೂ ಕಳಪೆ ಬೆಣ್ಣೆ ಮಾರಾಟ ಮಾಡಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಟಿ.ಎಚ್. ಹರೀಶ್ ನೇತೃತ್ವದ ಅಧಿಕಾರಿಗಳ ತಂಡ ಮಂಗಳವಾರ ಪಟ್ಟಣದಲ್ಲಿ ವಿವಿಧೆಡೆ ತಪಾಸಣೆ ನಡೆಸಿತು.
ವ್ಯಾನ್ ಹಾಗೂ ಗೂಡ್ಸ್ ಆಟೋಗಳಲ್ಲಿ ಬೆಣ್ಣೆ ತಂದು, ರೈತ ಮಹಿಳೆಯರ ಸೋಗಿನಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರಿಶೀಲನೆ ಕೈಗೊಂಡರು. ಅಧಿಕಾರಿಗಳು ತಪಾಸಣೆಗೆ ಬರುತ್ತಿದ್ದಂತೆ ಮಾರಾಟಕ್ಕೆ ತಂದಿದ್ದ ಬೆಣ್ಣೆ ಹಾಗೂ ವಾಹನಗಳನ್ನು ಬಿಟ್ಟು ಕಲಬೆರಕೆ ಬೆಣ್ಣೆ ಮಾರಾಟಗಾರರು ಪರಾರಿಯಾಗಿದ್ದರು.
ಬೆಣ್ಣೆಯ ಮಾದರಿ ಸಂಗ್ರಹಿಸಿ ಗುಣಮಟ್ಟ ಪರೀಕ್ಷೆಗಾಗಿ ಹಾಸನದ ಪ್ರಯೋಗಾಲಯಕ್ಕೆ ಕಳಿಸಲಾಗಿದೆ.
ಬೆಣ್ಣೆಯ ಮಾದರಿ ಪರೀಕ್ಷಾ ವರದಿ ಬಂದ ಬಳಿಕ ಅದರ ಗುಣಮಟ್ಟದ ಕುರಿತು ಸ್ಪಷ್ಟತೆ ದೊರೆಯಲಿದೆ. ವರದಿಯಲ್ಲಿ ಕಳಪೆ ಅಥವಾ ಕಲಬೆರಕೆ ದೃಢಪಟ್ಟರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ತಪಾಸಣೆ ವೇಳೆ ಆಹಾರ ನಿರೀಕ್ಷಕ ಶರತ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮೋಹನ್, ಅಚಲ್ ಹಾಗೂ ಸ್ಥಳೀಯ ರೈತರು ಇದ್ದರು.