ಹಾಸನ ನಗರದ ಆರ್.ಸಿ.ರಸ್ತೆಯ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಆರೋಗ್ಯ ಉಚಿತ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತು. ಡಾ.ವೆಂಕಟರಮಣ, ಡಾ.ಹೆಗಡೆ, ಉಮಾಮಹೇಶ್ವರ ಸ್ವಾಮೀಜಿ ಇತರರಿದ್ದರು.  
ಹಾಸನ

ಶಿಬಿರದಲ್ಲಿ 450 ಜನರಿಗೆ ಆರೋಗ್ಯ ತಪಾಸಣೆ

ಪ್ರಮುಖ ಮುಖ್ಯಾಂಶಗಳು

  • ಶಿಬಿರದಲ್ಲಿ 450 ಜನರಿಗೆ ಆರೋಗ್ಯ ತಪಾಸಣೆ
  • ರೋಗಿಗಳಿಗೆ ಸಲಹೆ, ಔಷಧ ವಿತರಣೆ
  • ವೈದ್ಯ ಡಾ. ವೆಂಕಟರಮಣ ಹೆಗಡೆ ಭಾಗಿ
ಹಾಸನ: ನಗರದ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಎರಡು ದಿನ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರ ಭಾನುವಾರ ಮುಕ್ತಾಯವಾಯಿತು.
ವೇದಭಾರತೀ ಹಾಗೂ ನೀಲಕಂಠೇಶ್ವರ ಸಮುದಾಯ ಭವನದ ಸಹಯೋಗದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ 450ಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆಗೊಳಗಾಗಿ ಸಲಹೆ ಹಾಗೂ ಔಷಧಗಳನ್ನು ಪಡೆದರು.
ಮೊದಲ ಬಾರಿಗೆ ಹಾಸನದಲ್ಲಿ ನಿಸರ್ಗಮನೆ ಆಸ್ಪತ್ರೆ ವೈದ್ಯ ಡಾ. ವೆಂಕಟರಮಣ ಹೆಗಡೆ ಅವರ ಮಾರ್ಗದರ್ಶನದಲ್ಲಿ ನಡೆದ ಶಿಬಿರಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಯಿತು.
ವೈದ್ಯ ಡಾ. ವೆಂಕಟರಮಣ ಹೆಗಡೆ ಸುದ್ದಿಗಾರರೊಂದಿಗೆ ಮಾತನಾಡಿ, ಈ ಶಿಬಿರದಲ್ಲಿ ಚರ್ಮ ಸಂಬಂಧಿತ ಕಾಯಿಲೆಗಳು, ಲಿವರ್ ಸಮಸ್ಯೆಗಳು, ಅಸಿಡಿಟಿ ಸೇರಿದಂತೆ ಹಲವು ಸಾಮಾನ್ಯ ಅಸೌಖ್ಯಗಳ ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿವೆ. ಎಲ್ಲರಿಗೂ ಉಚಿತ ಸಮಾಲೋಚನೆ ಹಾಗೂ ಉತ್ತಮ ಗುಣಮಟ್ಟದ ಔಷಧಗಳನ್ನು ನೀಡಲಾಯಿತು. ಮುಂದಿನ ದಿನಗಳಲ್ಲಿ ಎರಡು ತಿಂಗಳಿಗೆ ಒಮ್ಮೆ ಇಂತಹ ಶಿಬಿರಗಳನ್ನು ಹಮ್ಮಿಕೊಳ್ಳುವಂತೆ ಜನರಿಂದ ಬೇಡಿಕೆ ಬಂದಿದೆ ಎಂದು ತಿಳಿಸಿದರು.
‘ಸ್ವಾಸ್ಥ್ಯ ಅಂತಾರಾಷ್ಟ್ರೀಯ ಸಂಸ್ಥೆ’ ಬೆಂಗಳೂರು ಸಂಸ್ಥಾಪಕ ಉಮಾಮಹೇಶ್ವರ ಸ್ವಾಮೀಜಿ ಮಾತನಾಡಿ, ಹಾಸನದಲ್ಲಿ ಮೊದಲ ಬಾರಿಗೆ ದೊಡ್ಡ ಮಟ್ಟದ ಆರೋಗ್ಯ ಶಿಬಿರವನ್ನು ಡಾ.ಹೆಗಡೆ ನೇತೃತ್ವದಲ್ಲಿ ಉಚಿತವಾಗಿ ಆಯೋಜಿಸಲಾಗಿದೆ. ಆರೋಗ್ಯ ತಪಾಸಣೆ, ರಕ್ತ ಪರೀಕ್ಷೆ, ಆಹಾರ ಮಾರ್ಗದರ್ಶನದ ಜತೆಯಲ್ಲಿ ಬಂದವರಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ. ಸೇವಾಭಾವವೇ ಈ ಶಿಬಿರದ ಮುಖ್ಯ ಉದ್ದೇಶ ಎಂದು ಹೇಳಿದರು.
ವೇದ ಭಾರತೀ ಸಂಯೋಜಕರೂ ಆದ ಪತಂಜಲಿ ಪ್ರಾಂತ್ಯ ಯಜ್ಞ ಪ್ರಮುಖರಾದ ಹರಿಹರಪುರ ಶ್ರೀಧರ್ ಮಾತನಾಡಿ, ಶಿರಸಿಯ ನಿಸರ್ಗಮನೆ ಆಸ್ಪತ್ರೆಯಲ್ಲಿ ಆರೋಗ್ಯದ ಮಹತ್ವ, ‘ಆಹಾರವೇ ಔಷಧ’ ಎಂಬ ಸಂದೇಶವನ್ನು ಅನುಭವಿಸಿದ್ದೇವೆ. ಅದೇ ಸೇವೆಯನ್ನು ಹಾಸನದ ಜನತೆಗೆ ತಲುಪಿಸುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಿದ್ದೇವೆ. ದೇಹವನ್ನು ಆರೋಗ್ಯವಾಗಿಡಲು ಜೀವನಶೈಲಿ, ಆಹಾರ ಮತ್ತು ನಿಯಮಿತ ಅಭ್ಯಾಸಗಳು ಅತ್ಯಂತ ಮುಖ್ಯ. ಡಾ. ಹೆಗಡೆ ಅವರು ನೀಡಿದ ಮಾರ್ಗದರ್ಶನ ಜನರಲ್ಲಿ ಜಾಗೃತಿ ಮೂಡಿಸಿದೆ ಎಂದು ತಿಳಿಸಿದರು.
ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಚೈತ್ರಾ ನಾಯಕರಹಳ್ಳಿ, ಕಸಾಪ ಮಾಜಿ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ವೇದ ಭಾರತೀಯ ವೇದಾ, ಕಾರ್ಯದರ್ಶಿ ನಟರಾಜ್, ನಿಸರ್ಗ ಸೆಂಟರ್‌ನ ಪ್ರವೀಣ್ ಇತರರಿದ್ದರು.