ಕುವೆಂಪು ಯುವಕರ ಸಂಘದ ಅಧ್ಯಕ್ಷ ಐ.ಜಿ.ಗಿರೀಶ್ ಮಾಹಿತಿ
ಹಾಸನ: ನಗರದ ವಿದ್ಯಾನಗರದ ಕುವೆಂಪು ಯುವಕರ ಸಂಘದ ವತಿಯಿಂದ ಜು.5 ರಂದು ಫಿಟ್ ಹಾಸನ್ ಮ್ಯಾರಥಾನ್ ‘ನಮ್ಮ ನಡೆ ಆರೋಗ್ಯದ ಕಡೆ’ ಎಂಬ ವಿಶೇಷ ಆರೋಗ್ಯ ಜಾಗೃತಿ ಮ್ಯಾರಥಾನ್ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಐ.ಜಿ.ಗಿರೀಶ್ ಕುಮಾರ್ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ, ಪರಿಸರ ಜಾಗೃತಿ ಜೀವನಶೈಲಿ ಸಂಬಂಧಿತ ಕಾಯಿಲೆಗಳು ಹಾಗೂ ದೈಹಿಕ ಚಟುವಟಿಕೆ ಕೊರತೆ ಬಗ್ಗೆ ಹಾಗೂ ಇತರ ದುಶ್ಚಟಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಗರದ ಎಂ.ಜಿ. ರಸ್ತೆಯಲ್ಲಿ ಭಾನುವಾರ ಬೆಳಿಗ್ಗೆ 6.30ಕ್ಕೆ ಮ್ಯಾರಥಾನ್‌ಗೆ ಚಾಲನೆ ದೊರೆಯಲಿದ್ದು, ಪುರುಷರಿಗೆ 5 ಕಿ.ಮೀ. ಹಾಗೂ ಮಹಿಳೆಯರಿಗೆ 3 ಕಿ.ಮೀ. ವಿಭಾಗಗಳಲ್ಲಿ ಓಟ ನಡೆಯಲಿದೆ. ಸ್ಪರ್ಧೆಯಲ್ಲಿ ವಿಜೇತರಾಗುವವರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಭಾಗವಹಿಸುವವರಿಗೆ ನೋಂದಣಿ ಶುಲ್ಕವನ್ನು 99 ರೂ. ನಿಗದಿಪಡಿಸಲಾಗಿದ್ದು, ಭಾಗವಹಿಸುವವರಿಗೆ ಟಿ- ಶರ್ಟ್, ಪಾನೀಯ, ತಿಂಡಿ ನೀಡಲಾಗುವುದು ಎಂದರು.
ಪ್ರತಿದಿನ ಕನಿಷ್ಠ ಸ್ವಲ್ಪ ಸಮಯವಾದರೂ ವ್ಯಾಯಾಮ, ವಾಕಿಂಗ್ ಅಥವಾ ಓಟದಂತಹ ದೈಹಿಕ ಚಟುವಟಿಕೆ ರೂಢಿಸಿಕೊಳ್ಳುವ ಮೂಲಕ ಹೃದಯ ಸಂಬಂಧಿ ಕಾಯಿಲೆಗಳು ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು ಎಂಬ ಸಂದೇಶವನ್ನು ಜನರಿಗೆ ತಲುಪಿಸುವುದು ಕಾರ್ಯಕ್ರಮದ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.
ಈಗಾಗಲೇ 500 ಜನ ಸ್ಪರ್ಧಿಗಳು ಹೆಸರು ನೋಂದಾಯಿಸಿದ್ದು, ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು, ಸರ್ಕಾರಿ ಹಾಗೂ ಖಾಸಗಿ ನೌಕರರು, ಕ್ರೀಡಾಪಟುಗಳು, ಆರೋಗ್ಯಾಸಕ್ತರು ಸೇರಿದಂತೆ ಜಿಲ್ಲೆಯ ಎಲ್ಲ ವರ್ಗದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಕುವೆಂಪು ಯುವಕರ ಸಂಘದ ಗೌರವಾಧ್ಯಕ್ಷ , ರಂಗೇಗೌಡ ಹಾಗೂ ಸಮಾಜ ಸೇವಕ ಕಂಚಮಾರನಹಳ್ಳಿ ಕಾಂತರಾಜು ಡಾ.ಸಿ.ಎನ್.ಜಗದೀಶ್, ಜಿ.ಸಿ.ಧರ್ಮರಾಜ್, ರಾಜೇಶ್, ಕಂಚಮಾರನಹಳ್ಳಿ ಕಾಂತರಾಜು, ದಯಾನಿಧಿ ಇತರರಿದ್ದರು.