ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ಬಾಲಕ-ಬಾಲಕಿಯ ಗುಂಪು ಆಟದಲ್ಲಿ ಹಾಸನ ಜಿಲ್ಲೆ ತಂಡ ಸಮಗ್ರ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡಿದೆ.
- ಹಾಸನ, ಶ್ರೀಕ್ಷೇತ್ರ ಆದಿಚುಂಚನಗಿರಿ ತಂಡ ಚಾಂಪಿಯನ್
- 28ನೇ ರಾಜ್ಯ ಮಟ್ಟದ ಆದಿಚುಂಚನಗಿರಿ ಕ್ರೀಡಾಕೂಟ
- ಕ್ರೀಡಾಪಟುಗಳಿಗೆ ಬಹುಮಾನ ವಿತರಣೆ ವಿತರಿಸಿದ ಚುಂಚಶ್ರೀ
ಹಾಸನ: ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 28ನೇ ರಾಜ್ಯ ಮಟ್ಟದ ಆದಿಚುಂಚನಗಿರಿ ಕ್ರೀಡಾಕೂಟದಲ್ಲಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ ಬಾಲಕ-ಬಾಲಕಿಯರ ಸಮಗ್ರ ಗುಂಪು ಪಂದ್ಯಾವಳಿಯಲ್ಲಿ ಹಾಸನ ಜಿಲ್ಲೆ ಚಾಂಪಿಯನ್ ಪಟ್ಟ ಅಲಂಕರಿಸಿತು. ಅಥ್ಲೆಟಿಕ್ ಸ್ಪರ್ಧೆಗಳಲ್ಲಿ ಶ್ರೀಕ್ಷೇತ್ರ ಆದಿಚುಂಚನಗಿರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ಬಾಲಕ-ಬಾಲಕಿಯ ಗುಂಪು ಆಟದಲ್ಲಿ ಹಾಸನ ಜಿಲ್ಲೆ ತಂಡ ಸಮಗ್ರ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡಿದೆ. ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬೆಂಗಳೂರು ತಂಡ ಚಾಂಪಿಯನ್ ಪ್ರಶಸ್ತಿಗೆ ಭಾಜನವಾಗಿದೆ.
ಅಥ್ಲೆಟಿಕ್‌ನಲ್ಲಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕರ ವಿಭಾಗದಲ್ಲಿ ಶ್ರೀಕ್ಷೇತ್ರ ಆದಿಚುಂಚನಗಿರಿ ವಿದ್ಯಾರ್ಥಿಗಳು 32 ಅಂಕ ಪಡೆಯುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿದರು. ಬಾಲಕಿಯರ ವಿಭಾಗದಲ್ಲಿ 34 ಅಂಕ ಪಡೆದು ಚಿಕ್ಕಬಳ್ಳಾಪುರ ಸಮಗ್ರ ಪ್ರಶಸ್ತಿ ಪಡೆದುಕೊಂಡಿತು.
ಪ್ರೌಢಶಾಲಾ ವಿಭಾಗದಲ್ಲಿ ಅಥ್ಲೆಟಿಕ್‌ನ ಬಾಲಕರ ವಿಭಾಗದಲ್ಲಿ 43 ಅಂಕ ಪಡೆದು ಬಿ.ಜಿ.ನಗರ, ಬಾಲಕಿಯರ ವಿಭಾಗದಲ್ಲಿ 66 ಅಂಕ ಪಡೆದು ಶ್ರೀಕ್ಷೇತ್ರ ಆದಿಚುಂಚನಗಿರಿ, ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ 98 ಅಂಕ ಪಡೆದು ಶ್ರೀಕ್ಷೇತ್ರ ಆದಿಚುಂಚನಗಿರಿ ಚಾಂಪಿಯನ್ ಆಯಿತು.
ವೈಯಕ್ತಿಕ ಚಾಂಪಿಯನ್‌ನಲ್ಲಿ ಪ್ರಾಥಮಿ ಶಾಲಾ ಬಾಲಕರ ವಿಭಾಗದಲ್ಲಿ ಕೋಲಾರದ ಹೇಮಂತ್‌ಕುಮಾರ್, ಬಾಲಕಿಯರಲ್ಲಿ ಚಿಕ್ಕಬಳ್ಳಾಪುರ ಲಕ್ಷ್ಯ, ಪ್ರೌಢಶಾಲಾ ವಿಭಾಗ ಬಾಲಕರಲ್ಲಿ ಆದಿಚುಂಚನಗಿರಿಯ ಪೃಥ್ವಿ, ಬಾಲಕಿಯರಲ್ಲಿ ನಾಗರತ್ನಾ, ಕಾಲೇಜು ವಿಭಾಗದ ಬಾಲಕರ ವಿಭಾಗದಲ್ಲಿ ದಿನೇಶ್, ಬಾಲಕಿಯರಲ್ಲಿ ಧನುಶ್ರೀ ಹಾಗೂ ಪುಷ್ಪಾ ತಲಾ 15 ಅಂಕಗಳನ್ನು ಪಡೆದು ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಗೆ ಭಾಜನರಾದರು.
ವಿಜೇತ ಕ್ರೀಡಾಪಟುಗಳಿಗೆ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಹಾಸನ ಶಾಖಾ ಮಠದ ಶ್ರೀ ಶಂಭುನಾಥಸ್ವಾಮೀಜಿ, ಸಂಸದ ಶ್ರೇಯಸ್ ಪಟೇಲ್, ವಿವಿಧ ಮಠಾಧೀಶರು, ಗಣ್ಯರು ಪ್ರಶಸ್ತಿ, ಪಾರಿತೋಷಕಗಳನ್ನು ನೀಡಿದರು.
ಕಬಡ್ಡಿ, ಖೋಖೋ, ವಾಲಿಬಾಲ್‌ನಲ್ಲಿ ಹಾಸನ ಪ್ರಥಮ: 19 ವರ್ಷದ ಬಾಲಕರ ವಿಭಾಗದ ಕಬಡ್ಡಿಯಲ್ಲಿ ಹಾಸನ ಪ್ರಥಮ, ರಾಮನಗರ ದ್ವಿತೀಯ ಸ್ಥಾನ ಪಡೆದುಕೊಂಡಿತು. ವಾಲಿಬಾಲ್‌ನಲ್ಲಿ ಹಾಸನ(ಪ್ರ), ಖೋ-ಖೋ ಹಾಸನ(ಪ್ರ), ಭದ್ರಾವತಿ(ದ್ವಿ), ಹ್ಯಾಂಡ್‌ಬಾಲ್‌ನಲ್ಲಿ ತುಮಕೂರು(ಪ್ರ), ರಾಮನಗರ (ದ್ವಿ), ಶಟಲ್ ಬ್ಯಾಡಿಟನ್ ಶಿವಮೊಗ್ಗ(ಪ್ರ), ಮಂಡ್ಯ(ದ್ವಿ), ಡಾರ್ಜ್‌ಬಾಲ್‌ನಲ್ಲಿ ಆದಿಚುಂಚನಗಿರಿ(ಪ್ರ), ತುಮಕೂರು ದ್ವಿತೀಯ ಸ್ಥಾನ ಪಡೆದುಕೊಂಡಿದೆ.
19 ವರ್ಷದ ಬಾಲಕಿಯ ವಿಭಾಗದ ವಾಲಿಬಾಲ್‌ನಲ್ಲಿ ಹಾಸನ ಪ್ರಥಮ, ರಾಮನಗರ ದ್ವಿತೀಯ, ಖೋ-ಖೋ ಹಾಸನ ಪ್ರಥಮ, ಡಾರ್ಜ್‌ಬಾಲ್ ಆದಿಚುಂಚನಗಿರಿ ಪ್ರಥಮ, ಚಿಕ್ಕಬಳ್ಳಾಪುರ ದ್ವಿತೀಯ, ಶಟಲ್ ಬ್ಯಾಡ್ಮಿಂಟನ್ ಶಿವಮೊಗ್ಗ ಪ್ರಥಮ, ಬಿ.ಜಿ.ನಗರ ದ್ವಿತೀಯ, ಕಬಡ್ಡಿಯಲ್ಲಿ ಮಂಡ್ಯ (ಪ್ರ), ಶಿವಮೊಗ್ಗ ತಂಡ ದ್ವಿತೀಯ, 14 ವರ್ಷದ ಬಾಲಕರ ವಿಭಾಗದ ಕಬಡ್ಡಿಯಲ್ಲಿ ಮೈಸೂರು ಪ್ರಥಮ, ತುಮಕೂರು ದ್ವಿತೀಯ, ಬಾಲಕಿಯರ ವಿಭಾಗದ ಕಬಡ್ಡಿಯಲ್ಲಿ ಹಾಸನ ಪ್ರಥಮ, ಮೈಸೂರು ದ್ವಿತೀಯ ಸ್ಥಾನ ಪಡೆದುಕೊಂಡಿತು.
ಸಮಾರೋಪ ಸಮಾರಂಭದಲ್ಲಿ ಶ್ರೀಡಾ.ನಿರ್ಮಲಾನಂದನಾಥ ಸ್ವಾಮೀಜಿ, ಹಾಸನ ಶಾಖಾ ಮಠದ ಶ್ರೀ ಶಂಭುನಾಥಸ್ವಾಮೀಜಿ, ಚಿತ್ರದುರ್ಗ ಶ್ರೀಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಶ್ರೀಚಂದ್ರಶೇಖರನಾಥ ಸ್ವಾಮೀಜಿ, ಶ್ರೀ ಶಿವಪುತ್ರಸ್ವಾಮೀಜಿ ಇತರರಿದ್ದರು.
ಕ್ರೀಡಾಕೂಟದಲ್ಲಿ ಕೆಲವರಿಗೆ ಗೆಲುವಿನ ಖುಷಿಯಾಗಿದ್ದರೆ, ಕೆಲವರಿಗೆ ಸೋಲಿನ ನೋವಾಗಿದೆ. ದೇಹವನ್ನು ಸುಸ್ಥಿತಿಯಲ್ಲಿ ಇಟ್ಟಿಕೊಳ್ಳಲು, ಭವಿಷ್ಯದಲ್ಲಿ ಸೋಲು-ಗೆಲುವುಗಳನ್ನು ಸ್ವೀಕರಿಸಲು ಕ್ರೀಡೆ ಸಹಕಾರಿ. ಚಿಕ್ಕವಯಸ್ಸಿನಲ್ಲೇ ಸೋಲು, ಗೆಲುವು ಕಾಣಲು ಸಾಧ್ಯವಿದ್ದರೆ ಅದು ಆಟಗಳಲ್ಲಿ ಮಾತ್ರ. ಹೀಗಾಗಿ ಕ್ರೀಡಾಪಟುಗಳು ಗುಣಾತ್ಮಕ ಅಂಶಗಳನ್ನು ಬೆಳೆಸಿಕೊಂಡು ಮುನ್ನಡೆಯಬೇಕು.
ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಪೀಠಾಧಿಪತಿ, ಆದಿಚುಂಚನಗಿರಿ ಮಠ