ಪರಿಶಿಷ್ಟ ಜಾತಿಗೆ ಸೇರಿದ ಭೋವಿ (ವಡ್ಡರ) ಸಮುದಾಯದ ಪಾರಂಪರಿಕ ಕುಲಕಸುಬಾದ ಸೈಜುಕಲ್ಲು ಗಣಿಗಾರಿಕೆಗೆ ಅಡ್ಡಿಪಡಿಸಲಾಗುತ್ತಿದೆ ಎಂದು ಆರೋಪಿಸಿ, ಅಖಿಲ ಕರ್ನಾಟಕ ಭೋವಿ ಮಹಾಸಭಾ ವತಿಯಿಂದ ನಗರದ ಹಾಸನ ಡಿಸಿ ಕಚೇರಿ ಮುಂಭಾಗ ಇತ್ತೀಚೆಗೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. 
ಹಾಸನ

ಭೋವಿ ಮಹಾಸಭಾದಿಂದ ಪ್ರತಿಭಟನೆ

ಹಾಸನ: ಪರಿಶಿಷ್ಟ ಜಾತಿಗೆ ಸೇರಿದ ಭೋವಿ (ವಡ್ಡರ) ಸಮುದಾಯದ ಪಾರಂಪರಿಕ ಕುಲ ಕಸುಬಾದ ಸೈಜುಗಲ್ಲು ಗಣಿಗಾರಿಕೆಗೆ ಅಡ್ಡಿಪಡಿಸಲಾಗುತ್ತಿದೆ ಎಂದು ಆರೋಪಿಸಿ ಅಖಿಲ ಕರ್ನಾಟಕ ಭೋವಿ ಮಹಾಸಭಾ ವತಿಯಿಂದ ನಗರದ ಡಿಸಿ ಕಚೇರಿ ಮುಂಭಾಗ ಇತ್ತೀಚೆಗೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಮಹಾಸಭಾದ ರಾಜ್ಯಾಧ್ಯಕ್ಷ ಎಚ್.ಮಂಜಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ಕೆ.ಹೊಸಕೋಟೆ ಹೋಬಳಿ ವ್ಯಾಪ್ತಿಯ ಜಯಂತಿನಗರ, ಕಾರಗೋಡು, ವೈ.ಎನ್.ಪುರ ಗ್ರಾಮಗಳಲ್ಲಿ ವಾಸಿಸುವ ಭೋವಿ ಸಮುದಾಯದ ಜನರು ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ಸುಮಾರು 250ರಿಂದ 300 ಜನರು ಸ್ವಾವಲಂಬಿಯಾಗಿ ಬದುಕಲು ಮಗ್ಗೆ ಗ್ರಾಮದ ಸರ್ವೇ ನಂ.151ರ 3 ಎಕರೆ ಸರ್ಕಾರಿ ಗೋಮಾಳ ಜಮೀನಿನಲ್ಲಿ ಪಾರಂಪರಿಕ ಸೈಜುಗಲ್ಲು ಗಣಿಗಾರಿಕೆಯನ್ನು ನಡೆಸುತ್ತಿದ್ದಾರೆ ಎಂದು ವಿವರಿಸಿದರು.
1994ರ ನಿಯಮಾವಳಿಯಂತೆ 2015ರಿಂದ 20 ವರ್ಷಗಳ ಅವಧಿಗೆ ಗುತ್ತಿಗೆ ಮಂಜೂರಾಗಿದ್ದು, ಸುಮಾರು 60ರಿಂದ 70 ಕಾರ್ಮಿಕರು ಮಾನವ ಶ್ರಮದಿಂದ ಸುತ್ತಿಗೆ, ಉಳಿ ಉಪಕರಣಗಳನ್ನು ಬಳಸಿ ಕಲ್ಲು ಒಡೆದು ಜೀವನ ಸಾಗಿಸುತ್ತಿದ್ದಾರೆ. ‘ನಮಗೆ ಕೃಷಿ ಭೂಮಿ ಇಲ್ಲ, ಈ ವೃತ್ತಿಯೇ ಬದುಕಿನ ಆಧಾರ’ ಎಂದು ಅವರು ಹೇಳಿದರು. ಆದರೆ, ಕೆಲವು ಸವರ್ಣ ಸಮುದಾಯದವರು ದೇವಸ್ಥಾನ ನಿರ್ಮಾಣದ ಹೆಸರಿನಲ್ಲಿ ಹಣ ನೀಡುವಂತೆ ಹಾಗೂ ಮಾಸಿಕ ಮೊತ್ತ (ಮಾಮೂಲು) ಪಾವತಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು. ಆರ್ಥಿಕವಾಗಿ ಸಂಕಷ್ಟದಲ್ಲಿರುವ ನಾವು ಹಣ ನೀಡಲು ಸಾಧ್ಯವಿಲ್ಲವೆಂದು ಹೇಳಿದ ಬಳಿಕ ದುರುದ್ದೇಶದಿಂದ ಸುಳ್ಳು ಆರೋಪಗಳನ್ನು ಮಾಡಿ ಗಣಿಗಾರಿಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು ಎಂದು ಹೇಳಿದರು.
ನಂತರ ಸಂಬಂಧಪಟ್ಟ ಇಲಾಖೆ ಪರಿಶೀಲನೆ ನಡೆಸಿ ಆರೋಪಗಳಿಗೆ ಆಧಾರ ಇಲ್ಲವೆಂದು ಕಂಡು, ಗಣಿಗಾರಿಕೆ ಮರು ಆರಂಭಕ್ಕೆ ಅನುಮತಿ ನೀಡಿದೆ. ಆದರೂ ಮತ್ತೆ ಕೆಲಸ ಆರಂಭಿಸಿದ ಬಳಿಕ ದಬ್ಬಾಳಿಕೆ, ಹಲ್ಲೆ, ಕೊಲೆ ಬೆದರಿಕೆ ಹಾಗೂ ಜಾತಿ ನಿಂದನೆ ನಡೆಯುತ್ತಿದೆ ಎಂದು ಆರೋಪ ಮಾಡಿದರು. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ದಲಿತ ಸಮುದಾಯವನ್ನು ಸ್ಥಳಾಂತರಗೊಳಿಸಲು ಸಂಚು ರೂಪಿಸಲಾಗಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಪ್ರವೀಣ್‌ಗೌಡ, ಸಂದೀಪ್, ಎಂ.ಮಹಾದೇವ್, ರಾಜು ಇತರರಿದ್ದರು.