ಹಾಸನದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹನುಮಂತೆಗೌಡ, ಜಯಕುಮಾರ್, ಸತೀಶ್ ಕುಮಾರ್, ಕೆ.ಎಂ. ಶ್ರೀನಿವಾಸ್,ಅಶ್ವತ್, ಸಂತೋಷ್ ಶೆಟ್ಟಿ, ವೇಣುಗೋಪಾಲ್, ಮಂಜುನಾಥ್, ತ್ರಿಭುವನ್, ಶಶಿಧರ್ ಇತರರಿದ್ದರು.
- ಹಾಸನ ಬಾಲಕ-ಬಾಲಕಿಯರ ತಂಡ ರನ್ನರ್ ಅಪ್
- ರಾಜ್ಯ ಮಟ್ಟದ ಸಬ್ ಜೂನಿಯರ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್
- ಕೆ.ಎಚ್.ಸಿಂಚನಾ ‘ಸ್ಟ್ರಾಂಗ್ ಗರ್ಲ್’
ಹಾಸನ: ನಗರದ ಅಂಬೇಡ್ಕರ್ ಭವನದಲ್ಲಿ ಹಾಸನ ಪವರ್ ಲಿಫ್ಟಿಂಗ್ ಸಂಸ್ಥೆ ವತಿಯಿಂದ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಸಬ್‌ಜೂನಿಯರ್ ಕ್ಲಾಸಿಕ್ ಹಾಗೂ ಎಕ್ವಿಪ್ಡ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಹಾಸನದ ಬಾಲಕ-ಬಾಲಕಿಯರ ತಂಡಗಳು ರನ್ನರ್‌ಅಪ್ ತಂಡ ಪ್ರಶಸ್ತಿ ಪಡೆದಿದೆ.
43 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ ಕೆ.ಎಚ್. ಸಿಂಚನಾ ಅತ್ಯುತ್ತಮ ಸಾಧನೆ ಮಾಡಿ ಎಲ್ಲರ ಗಮನ ಸೆಳೆದರು. ಕ್ಲಾಸಿಕ್ ಹಾಗೂ ಎಕ್ವಿಪ್ಡ್ ಎರಡೂ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ಐದನೇ ಬಾರಿಗೆ ರಾಜ್ಯದ ‘ಬೆಸ್ಟ್ ಲಿಫ್ಟರ್’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಜತೆಗೆ ಸಬ್‌ಜೂನಿಯರ್ ರಾಜ್ಯ ಮಟ್ಟದಲ್ಲಿ ‘ಸ್ಟ್ರಾಂಗ್ ಗರ್ಲ್’ ಗೌರವಕ್ಕೂ ಭಾಜನರಾದರು. 83 ಕೆಜಿ ವಿಭಾಗದಲ್ಲಿ ಬಿ.ಸಿ.ನೂತನ್ ರಾಜ್ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗೆದ್ದರು. 79 ಕೆಜಿ ವಿಭಾಗದಲ್ಲಿ ಶ್ರಾವ್ಯ ಕ್ಲಾಸಿಕ್ ಹಾಗೂ ಎಕ್ವಿಪ್ಡ್ ಎರಡೂ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ದ್ವಿಗುಣ ಸಾಧನೆ ಮಾಡಿದರು. 69 ಕೆಜಿ ವಿಭಾಗದಲ್ಲಿ ಲಿಖಿತಾ ಶ್ರೀ ಎಕ್ವಿಪ್ಡ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ತಮ್ಮದಾಗಿಸಿಕೊಂಡರೆ, ಕ್ಲಾಸಿಕ್ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಮತ್ತೊಂದು ಪದಕ ಜಯಿಸಿದರು. 69 ಕೆಜಿ ವಿಭಾಗದಲ್ಲಿ ದಿಯಾ ಎಕ್ವಿಪ್ಡ್ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದರು. 57 ಕೆಜಿ ವಿಭಾಗದಲ್ಲಿ ಯಶಸ್ವಿನಿ ಕ್ಲಾಸಿಕ್ ಹಾಗೂ ಎಕ್ವಿಪ್ಡ್ ಎರಡೂ ವಿಭಾಗಗಳಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಗೆದ್ದರು. 59 ಕೆಜಿ ವಿಭಾಗದಲ್ಲಿ ತರುಣ್ ಸಾಗರ್ ತೃತೀಯ ಸ್ಥಾನ ಪಡೆದರೆ, 93 ಕೆಜಿ ವಿಭಾಗದಲ್ಲಿ ಸಮರ್ಥ್ ಎಕ್ವಿಪ್ಡ್ ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿ ತಂಡದ ಸಾಧನೆಗೆ ಕೈಜೋಡಿಸಿದರು. ಹಾಸನ ಪವರ್‌ಲಿಫ್ಟಿಂಗ್ ಸಂಸ್ಥೆ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಕ್ರಮವಾಗಿ ರನ್ನರ್‌ಅಪ್ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಸಮಾರೋಪ ಸಮಾರಂಭದಲ್ಲಿ ಸಂಸ್ಥೆ ಸಂಸ್ಥಾಪಕ ಹನುಮಂತೇಗೌಡ ಮಾತನಾಡಿ, ಕ್ರೀಡಾಪಟುಗಳ ನಿರಂತರ ಪರಿಶ್ರಮ, ಪಾಲಕರ ಬೆಂಬಲ ಮತ್ತು ತರಬೇತುದಾರರ ಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ. ಹಾಸನ ಜಿಲ್ಲೆಯಿಂದ ಇನ್ನಷ್ಟು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಹೊರಹೊಮ್ಮಬೇಕು ಎಂಬುದು ನಮ್ಮ ಆಶಯ ಎಂದರು.
ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ್, ಪವರ್ ಲಿಫ್ಟಿಂಗ್ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಸತೀಶ್ ಕುಮಾರ್, ಸಂಸ್ಥೆಯ ಗೌರವಾಧ್ಯಕ್ಷ ಕೆ.ಎಂ. ಶ್ರೀನಿವಾಸ್, ಖಜಾಂಚಿ ಅಶ್ವತ್, ಸಹ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ವೇಣುಗೋಪಾಲ್, ಮಂಜುನಾಥ್, ತ್ರಿಭುವನ್, ಶಶಿಧರ್, ಸಿ.ಕೆ.ರಘು, ಶಿವಮೊಗ್ಗ ಜಿಲ್ಲಾ ಪವರ್ ಲಿಫ್ಟಿಂಗ್ ಸಂಸ್ಥೆಯ ಅಧ್ಯಕ್ಷ ಕಾರಂತ್, ಮಧುಚಂದ್ರ, ಜಯರಾಂ, ಶಿವಣ್ಣ ಇತರರಿದ್ದರು.