ಹಾಸನ ಆಕಾಶವಾಣಿ ರೇಡಿಯೊ ಕಿಸಾನ್ ದಿವಸದ ಅಂಗವಾಗಿ ಕೃತಕ ಬುದ್ಧಿಮತ್ತೆ ಹಾಗೂ ಕೃಷಿ ಅಭಿವೃದ್ಧಿ ಕುರಿತ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು. ಎಸ್.ಲತಾಕುಮಾರಿ, ಎನ್.ಜಿ.ಕಿರಣ್, ಸುಜಾತಾ ಎಫ್ ತಳವಾರ್, ವಿ.ಮಧುಸೂದನ್ ಇತರರಿದ್ದರು. 
ಹಾಸನ

ಕೃಷಿ ಕ್ಷೇತ್ರದಲ್ಲಿ ಬದಲಾವಣೆ ತರಲಿದೆ ಎಐ

ಹಾಸನ: ಬದಲಾದ ತಂತ್ರಜ್ಞಾನ ಯುಗದಲ್ಲಿ ಕೃತಕ ಬುದ್ಧಿಮತ್ತೆ ಕೃಷಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರಲಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ತಿಳಿಸಿದರು.
ಹಾಸನ ಆಕಾಶವಾಣಿ ರೇಡಿಯೊ ಕಿಸಾನ್ ದಿವಸದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಕೃತಕ ಬುದ್ಧಿಮತ್ತೆ ಹಾಗೂ ಕೃಷಿ ಅಭಿವೃದ್ಧಿ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಹವಾಮಾನ ಮುನ್ಸೂಚನೆ, ಮಣ್ಣು ಪರೀಕ್ಷೆ, ಬೆಳೆ ಸಂರಕ್ಷಣೆ ಹಾಗೂ ಮಾರುಕಟ್ಟೆ ದರಗಳ ವಿಶ್ಲೇಷಣೆಯಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ರೈತರ ಕೃಷಿ ಚಟುವಟಿಕೆಗಳು ಹಾಗೂ ರೈತರ ಆದಾಯದ ದ್ವಿಗುಣಕ್ಕೆ ಹೆಚ್ಚು ಸಹಾಯ ಮಾಡುತ್ತದೆ ಎಂದು ಹೇಳಿದರು.
50ರ ದಶಕದಿಂದಲೂ ಆಕಾಶವಾಣಿ ಕೃಷಿ ಸೇರಿದಂತೆ ಇತರ ತಂತ್ರಜ್ಞಾನಗಳನ್ನು ಸಾರ್ವಜನಿಕರಿಗೆ ಪರಿಚಯಿಸುವ ಪರಿಪಾಠ ಬೆಳೆಸಿಕೊಂಡಿದ್ದು, ಇದು ಇಂದಿಗೂ ಮುಂದುವರಿದಿರುವುದು ಮೆಚ್ಚುಗೆಯ ಸಂಗತಿ. ಹಾಸನ ಆಕಾಶವಾಣಿ ಕೃಷಿಕರಿಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಗ್ಗೆ ಜಾಗೃತಿ ಮೂಡಿಸುವ ವಿಚಾರ ಸಂಕಿರಣ ಏರ್ಪಡಿಸಿರುವುದು ಅತ್ಯಂತ ಸೂಕ್ತವಾಗಿದೆ ಎಂದು ಹೇಳಿದರು.
ವಿಚಾರಗೋಷ್ಠಿಯಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಕೃಷಿ ಅಭಿವೃದ್ಧಿಯ ಸಾಧ್ಯತೆಗಳ ಕುರಿತು ಬೆಂಗಳೂರಿನ ಎಐ ವಿನ್ಯಾಸಕ ಎನ್. ಜಿ. ಕಿರಣ್ ಮಾಹಿತಿ ನೀಡಿದರು.
ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಡಾ. ಪಿ.ರಮೇಶ್ ಕುಮಾರ್, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ. ಎಚ್.ಆರ್.ಯೋಗೇಶ್, ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥರಾದ ಸುಜಾತಾ ಎಫ್ ತಳವಾರ್, ಆಕಾಶವಾಣಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಅರಕಲಗೂಡು ವಿ. ಮಧುಸೂದನ್ ಹಾಗೂ ಜಿಲ್ಲೆಯ ವಿವಿಧ ಭಾಗಗಳ ಪ್ರಗತಿಪರ ಕೃಷಿಕರು ಭಾಗವಹಿಸಿದ್ದರು.