ಅರಕಲಗೂಡಿನಲ್ಲಿ ತಾಲೂಕು ಆಡಳಿತದ ವತಿಯಿಂದ ಶನಿವಾರ ಏರ್ಪಡಿಸಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ದೇಶಭಕ್ತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿ ಗಮನಸೆಳೆದರು.  
ಹಾಸನ

ಮಹನೀಯರ ತ್ಯಾಗವನ್ನು ಸ್ಮರಿಸಬೇಕು

ಎ. ಆರ್. ರಘುರಾಮ

ಅರಕಲಗೂಡು :

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗವನ್ನು ಸ್ಮರಿಸಬೇಕು ಎಂದು ಶಾಸಕ ಎ. ಮಂಜು ಹೇಳಿದರು.

ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶನಿವಾರ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಾತಿ, ಧರ್ಮ, ಭಾಷೆ ಹಾಗೂ ಪಕ್ಷಭೇದಗಳನ್ನು ಮೀರಿ ಕರ್ನಾಟಕ ಹಾಗೂ ಭಾರತವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಬೇಕು ಎಂದರು. ಸಮಾನತೆ, ನ್ಯಾಯ, ಶಿಕ್ಷಣ, ಉದ್ಯೋಗ, ರೈತರ ಕಲ್ಯಾಣ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಹೇಳಿದರು.
ತಹಸೀಲ್ದಾರ್ ಕೆ.ಸಿ. ಸೌಮ್ಯಾ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಮಹನೀಯರ
ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಿದಾಗ ಮನಸ್ಸು ಭಾವುಕವಾಗುತ್ತದೆ. ಸ್ವಾತಂತ್ರ್ಯವೆಂದರೆ ಕೇವಲ ಒಂದು ದಿನದ ಸಂಭ್ರಮವಲ್ಲ. ಅದು ಸಾವಿರಾರು ತ್ಯಾಗಗಳ ಫಲ, ಕೋಟ್ಯಂತರ ಭಾರತೀಯರ ಕನಸು ಹಾಗೂ ನಮ್ಮ ಪೂರ್ವಜರ ಹೋರಾಟದ ಪ್ರತೀಕವಾಗಿದೆ ಎಂದು ಹೇಳಿದರು.
ಹೋರಾಟಗಾರರು ಮತ್ತು ರಾಷ್ಟ್ರ ಪುರುಷರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದ ಗೌರವ ಮತ್ತು ಧನ್ಯತೆಯ ಪ್ರತೀಕ ಎಂದರು.
ಸ್ವಾತಂತ್ರ್ಯದ ಮೌಲ್ಯವನ್ನು ಮುಂದಿನ ಪೀಳಿಗೆಗೆ ತಿಳಿಸುವುದರ ಜತೆಗೆ ದೇಶದ ಏಕತೆ, ಅಖಂಡತೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರ ಮೇಲಿದೆ ಎಂದು ತಿಳಿಸಿದರು.
ತಾಪಂ ಇಒ ಶ್ರೀನಿವಾಸ್, ಪಪಂ ಮುಖ್ಯಾಧಿಕಾರಿ ನಾಗೇಂದ್ರ ಕುಮಾರ್, ಬಿಇಒ ನಾರಾಯಣ, ತಾಲೂಕು ನೌಕರರ ಸಂಘದ ಅಧ್ಯಕ್ಷ ಪುಟ್ಟರಾಜು, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು. ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶಿಸಿ ನೆರೆದವರ ಗಮನ ಸೆಳೆದರು.