ಪಟ್ಟಣದ ಯುರೋಕಿಡ್ಸ್, ವಿದ್ಯಾ ವಿಕಾಸ ಪಬ್ಲಿಕ್ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಗಣ್ಯರು ಉದ್ಘಾಟಿಸಿದರು. ಬೇಲೂರು-ಹಳೇಬೀಡು ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಯ್ಯದ್ ತೌಫಿಕ್, ಪುರಸಭೆ ಅಧ್ಯಕ್ಷೆ ಉಷಾ ಸತೀಶ್, ಬಿಸಿಐಲ್ ಸಂಸ್ಥೆ ಮುಖ್ಯಸ್ಥ ಗಿರೀಶ್, ಶಾಲೆಯ ಆಡಳಿತಾಧಿಕಾರಿ ಪದ್ಮಾ ಜಯಕುಮಾರ್, ಇತರರು ಇದ್ದರು.
ಬೇಲೂರು: ವಿದ್ಯಾರ್ಥಿಗಳು ಪಠ್ಯದ ಜತೆಯಲ್ಲೇ ಪಠ್ಯೇತರ ಚಟುವಟಿಕೆಯಲ್ಲೂ ಸಾಧನೆ ಮಾಡುವುದರೊಂದಿಗೆ ಮಾನವೀಯ ಮೌಲ್ಯ ಹಾಗೂ ದೇಶಭಕ್ತಿಯನ್ನು ರೂಢಿಸಿಕೊಳ್ಳಬೇಕು ಎಂದು ಬೇಲೂರು-ಹಳೇಬೀಡು ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಯ್ಯದ್ ತೌಫಿಕ್ ಹೇಳಿದರು.
ಪಟ್ಟಣದ ಯುರೋಕಿಡ್ಸ್, ವಿದ್ಯಾ ವಿಕಾಸ ಪಬ್ಲಿಕ್ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ವರ್ಷವೆಲ್ಲ ಪಠ್ಯದ ಜತೆ ಇರುತ್ತಾರೆ. ಅವರಿಗೆ ಪಠ್ಯದ ಜತೆಯೇ ವಿವಿಧ ರೀತಿಯ ಚಟುವಟಿಕೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮ ಪ್ರತಿಭೆಯನ್ನು ಹೊರ ಹಾಕಲು ಇಂತಹ ಕಾರ್ಯಕ್ರಮಗಳು ಅತ್ಯವಶ್ಯಕ. ವಿದ್ಯಾರ್ಥಿಗಳು ಸಹ ಶಾಲೆಗೆ ಕೀರ್ತಿ ತರುವಂತಾಗಬೇಕು ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಜಿ.ಶಾಂತಕುಮಾರ್ ಮಾತನಾಡಿ, 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾವಿಕಾಸ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ಜತೆಗೆ ಈ ಶಿಕ್ಷಣ ಸಂಸ್ಥೆಯು ಸಹ ಪ್ರಾರಂಭದಿದಲೂ ಪಠ್ಯದ ಜತೆಗೆ ಕಲೆ, ಸಾಹಿತ್ಯ, ಸಾಂಸ್ಕೃತಿಕ, ದೇಶಪ್ರೇಮ, ಕ್ರೀಡೆ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾ ವಿಕಾಸ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಬಿ.ಎಂ.ರಂಗನಾಥ್ ಮಾತನಾಡಿ, ವಿದ್ಯಾರ್ಥಿಗಳು ಓದಿನಲ್ಲಿ ಮಾತ್ರ ಮುಂದಿದ್ದರೆ ಸಮಾಜವನ್ನು ಎದುರಿಸುವ ಶಕ್ತಿಯನ್ನು ಪಡೆಯುವುದಿಲ.್ಲ ಆದ್ದರಿಂದ ಕರಾಟೆ, ಸ್ನೇಹ, ಸಹಬಾಳ್ವೆ, ಸಾಮಾನ್ಯ ಜ್ಞಾನದ ಬಗ್ಗೆ ವಿದ್ಯಾರ್ಥಿಗಳಿಗೆ ನಮ್ಮಲ್ಲಿ ಕಲಿಸಲಾಗುತ್ತಿದೆ ಎಂದರು.
ಪುರಸಭೆ ಅಧ್ಯಕ್ಷೆ ಉಷಾ ಸತೀಶ್, ಬಿಸಿಐಲ್ ಸಂಸ್ಥೆ ಮುಖ್ಯಸ್ಥ ಗಿರೀಶ್, ಶಾಲೆಯ ಆಡಳಿತಾಧಿಕಾರಿ ಪದ್ಮಾ ಜಯಕುಮಾರ್, ಟ್ರಸ್ಟಿ, ಆಶಾ ರಂಗನಾಥ್, ಪ್ರಾಂಶುಪಾಲ ಎಸ್.ಬಾಲಾಜಿ, ಯುರೋಕಿಡ್ಸ್ ಸಂಯೋಜಕಿ ಶಾಲಿನಿ ಕೇಶವ್ ಇದ್ದರು.