ಮಾವನೂರು ಗ್ರಾಮದಲ್ಲಿರುವ ಶ್ರೀ ವೀರಭದ್ರಸ್ವಾಮಿಯ ದೇವಾಲಯ. 
ಹಾಸನ

ವೀರಭದ್ರಸ್ವಾಮಿ ಅವರ ಕಾರ್ತಿಕ ಮಾಸದ ಜಾತ್ರಾ ಮಹೋತ್ಸವ

ಆಲೂರು: ಪುರಾಣ ಪ್ರಸಿದ್ಧಶ್ರೀ ವೀರಭದ್ರಸ್ವಾಮಿ ಅವರ ಕಾರ್ತಿಕ ಮಾಸದ ಜಾತ್ರಾ ಮಹೋತ್ಸವ ನ.19 ಹಾಗೂ ನ.20ರ ಜರುಗಲಿದ್ದು, ಮಾವನೂರು ಗ್ರಾಮ ಸಜ್ಜಾಗಿದೆ.
ತಾಲೂಕಿನ ಕಸಬಾ ಹೋಬಳಿಗೆ ಸೇರಿದ ಮಾವನೂರು ಗ್ರಾಮದಲ್ಲಿ ಪುರಾತನ ಕಾಲದಿಂದಲೂ ಪ್ರತಿವರ್ಷ ವೀರಭದ್ರೇಶ್ವರ ಜಾತ್ರೆಯು ಶ್ರದ್ಧಾಭಕ್ತಿಯಿಂದ ಉತ್ಸವವಾಗಿ ನಡೆದುಕೊಂಡು ಬರುತ್ತಿದೆ. ಕಾರ್ತಿಕ ಮಾಸದ ಜಾತ್ರಾ ಮಹೋತ್ಸವದ ಈ ಜಾತ್ರೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವ ಮೂಲಕ ವೀರಭದ್ರೇಶ್ವರನ ದರ್ಶನ ಪಡೆಯುತ್ತಾರೆ. ಕಡೇ ಕಾರ್ತಿಕ ಮಾಸದ ವಿಶೇಷವಾಗಿ ಈ ದೇವಾಲಯದಲ್ಲಿ ಸ್ವಾಮಿಯ ಉತ್ಸವ ಮೂರ್ತಿಯನ್ನು ದೇವಾಲಯದ ಒಳಆವರಣದಲ್ಲಿ ಧಾರ್ಮಿಕ ವಿಧಿ- ವಿಧಾನಗಳೊಂದಿಗೆ ಪೂಜೆ ಪುನಸ್ಕಾರವನ್ನು ನೆರವೇರಿಸಿ ದೇವಾಲಯದ ಒಳ ಆವರಣದಲ್ಲಿ ಮೂರು ಸುತ್ತು ಪ್ರದಕ್ಷಿಣೆ ಮಾಡಿದ ಬಳಿಕ ಉತ್ಸವಮೂರ್ತಿಯನ್ನು ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗುವುದು. ದೀಪದ ಗಿರಿ ಒಡ್ಡಿನಲ್ಲಿ ಸಿದ್ಧಪಡಿದ ಮಹಾಜ್ಯೋತಿಗೆ ವಿವಿಧ ಪೂಜಾ ಪುನಸ್ಕಾರ ನೆರವೇರಿಸಿದ ನಂತರ ದೇವಾಲಯದ ಪ್ರಧಾನ ಆರ್ಚಕ ಜಗದೀಶ್ ಶಾಸ್ತ್ರಿಗಳು ಮಹಾಜ್ಯೋತಿಯನ್ನು ಬೆಳಗಿಸುವರು. ಮಹಾಜ್ಯೋತಿ ಬೆಳಗಿದ ನಂತರ ಅಲ್ಲಿಂದ ಉತ್ಸವ ಮೂರ್ತಿಯನ್ನು ದೇವಾಯದಲ್ಲಿ ಮೂರು ಸುತ್ತು ಪ್ರದಕ್ಷಿಣೆ ಹಾಕಲಾಗುವುದು.
ಕಾರ್ತಿಕ ಮಾಸದ ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀ ವೀರಭದ್ರಸ್ವಾಮಿ ಮತ್ತು ಶ್ರೀ ಈಶ್ವರಸ್ವಾಮಿ ಹಾಗೂ ಹಣೋಳದಮ್ಮನವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗುವುದು. ನ.19ರಂದು ಸಂಜೆ ಶ್ರೀ ಈಶ್ವರ ಸ್ವಾಮಿಗೆ ರುದ್ರಾಭಿಷೇಕ, ವಿಶೇಷ ಅಲಂಕಾರ, ಸಹಸ್ರ ಬಿಲ್ವಾರ್ಚನೆ ನೆರವೇರಲಿದೆ. ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ಇರಲಿದೆ. ಸಂಜೆ 7.30ಕ್ಕೆ ಹೆಸರಾಂತ ಕಲಾವಿದರಾದ ಜೂ. ರಾಜ್‌ಕುಮಾರ್ ಅವರಿಂದ ಸಂಗೀತ ಕಾರ್ಯಕ್ರಮ. ರಾತ್ರಿ 11ರಿಂದ ಗಂಗಾಪೂಜೆ, ಶ್ರೀ ವೀರಭದ್ರೇಶ್ವರ ಸ್ವಾಮಿ ಅವರಿಗೆ ಏಕದಶಾ ರುದ್ರಾಭಿಷೇಕಾ ವಿಶೇಷ ಅಲಂಕಾರ ರಾಜೋಪಚಾರ ಪೂಜೆ ನೆರವೇರುತ್ತದೆ. ರಾತ್ರಿ 1.30ಕ್ಕೆ ನಂದಿಧ್ವಜ ಸಮೇತ ಸುವಾಸಿನಿಯರ ಆರತಿ ಮೆರವಣಿಗೆ ನಡೆಯಲಿದೆ. ನ. 20ರಂದು ಬೆಳಗಿನ ಜಾವ 3.50ಕ್ಕೆ ಶ್ರೀ ವೀರಭದ್ರಸ್ವಾಮಿ ಅವರ ಅಡ್ಡೆ, ನಂದಿಧ್ವಜ ಹಾಗೂ ಹಲಗೆ ದೇವರ ಉತ್ಸವ ನಡೆಯುವುದು. ಬೆಳಗ್ಗೆ 6ರಿಂದ 6.23ರ ಒಳಗೆ ಬ್ರಾಹ್ಮೀ ಲಗ್ನದಲ್ಲಿ ವೀರಭದ್ರ ಸ್ವಾಮಿ ಅವರ ಅಗ್ನಿಕೊಂಡೋತ್ಸವ ನೆರವೇರುತ್ತದೆ. ನಂತರ ಪ್ರಸಾದ ವಿನಿಯೋಗ ಇರುತ್ತದೆ. ಮಧ್ಯಾಹ್ನ 12.50ಕ್ಕೆ ಅಭಿಜಿನ್ ಲಗ್ನದಲ್ಲಿ ಯಗಚಿ ನದಿತೀರದಲ್ಲಿ ಗಂಗಾಪೂಜೆ ನಂತರ ನಂದಿಧ್ವಜ ಮತ್ತು ವೀರಗಾಸೆ ಕುಣಿತ ಸಮೇತ ಉತ್ಸವ ನಡೆದು ನಂತರ ದಿನ ನಿತ್ಯದಂತೆ ಪ್ರತಿದಿನ ಬೆಳಗ್ಗೆ ಸಂಜೆ ಪೂಜೆ ನೆರವೇರಿಲಿದೆ.