ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಮೊಮ್ಮಗ ಭೀಮರಾವ್ ಯಶ್ವಂತ್ ಅಂಬೇಡ್ಕರ್ ಅವರು ಬೇಲೂರಿಗೆ ಆಗಮಿಸಿದ ಸಂದರ್ಭ ಅಭಿಮಾನಿಗಳು ಅಭಿನಂದಿಸಿದರು. 
ಹಾಸನ

ಅಂಬೇಡ್ಕರ್ ಮೊಮ್ಮಗ ಭೀಮರಾವ್ ಯಶ್ವಂತ್‌ಗೆ ಸ್ವಾಗತ

ಲೋಕೇಶ್ ಮನು. ಡಿ
ಬೇಲೂರು: ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಮೊಮ್ಮಗ ಭೀಮರಾವ್ ಯಶ್ವಂತ್ ಅಂಬೇಡ್ಕರ್ ಅವರು ಬುಧವಾರ ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿರುವ ಡಾ.ಅಂಬೇಡ್ಕರ್ ಪ್ರತಿಮೆಗೆ ಅಭಿಮಾನಿಗಳೊಂದಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಚಿಕ್ಕಮಗಳೂರಿನಿಂದ ಬೇಲೂರು ಮೂಲಕ ತಾಲೂಕಿನ ಮದಘಟ್ಟದ ಗಾಂಧಾರ ಬುದ್ಧ ವಿಹಾರಕ್ಕೆ ತೆರಳುತ್ತಿದ್ದ ಭೀಮರಾವ್ ಯಶ್ವಂತ್ ಅಂಬೇಡ್ಕರ್ ಅವರನ್ನು ಮಾರ್ಗಮಧ್ಯೆ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತಡೆದ ಬೇಲೂರಿನ ಅಂಬೇಡ್ಕರ್ ಅಭಿಮಾನಿಗಳು ಗೌರವಿಸಿದರು. ನಂತರ ತಹಸೀಲ್ದಾರ್ ಕಚೇರಿ ಆವರಣದ ಡಾ.ಅಂಬೇಡ್ಕರ್ ಪ್ರತಿಮೆಗೆ ತೆರಳಿ ಹಾರ ಹಾಕುವ ಮೂಲಕ ಗೌರವ ಸಲ್ಲಿಸಿ ನೇರವಾಗಿ ತಾಲೂಕಿನ ಮದಘಟ್ಟದಲ್ಲಿರುವ ಗಾಂಧಾರ ಬುದ್ಧ ವಿಹಾರಕ್ಕೆ ತೆರಳಿದರು.
ಇದೇ ಸಂದರ್ಭ ಸಮುದಾಯದ ಹಲವಾರು ಮುಖಂಡರು, ಅನುಯಾಯಿಗಳು ಮತ್ತು ಅಭಿಮಾನಿಗಳು ಭಾಗವಹಿಸಿ ಭೀಮ ಘೋಷಣೆ ಕೂಗಿ ಭೀಮರಾವ್ ಯಶ್ವಂತ್ ಅಂಬೇಡ್ಕರ್‌ಗೆ ಗೌರವ ಸಲ್ಲಿಸಿದರು.
ಭೌದ್ಧ ಮಹಾಸಭಾ ರಾಜ್ಯಾಧ್ಯಕ್ಷ ನಿವೃತ್ತ ಡಿಸಿಪಿ ಸಿದ್ಧರಾಜು, ತಾಪಂ ಮಾಜಿ ಅಧ್ಯಕ್ಷ ಪರ್ವತಯ್ಯ, ಮಾಜಿ ಸದಸ್ಯ ಮಂಜುನಾಥ್, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ್, ಪುರಸಭೆ ಸದಸ್ಯ ಚಾ.ನಾ.ದಾನಿ, ದಲಿತ ಮುಖಂಡರಾದ ಲಕ್ಷ್ಮಣ್, ವೆಂಕಟೇಶ್, ರಘು, ರವಿ, ವಕೀಲ ರಾಜು, ನಿಂಗರಾಜು, ಸತೀಶ್ ಇತರರಿದ್ದರು.