ಕೋಟೆಮನೆ ಇಂಟರ್‌ನ್ಯಾಷನಲ್ ಸ್ಕೂಲ್‌ನ ಕಲೋತ್ಸವ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಡಾ.ಬಿ.ಮಂಜಮ್ಮ ಜೋಗತಿ ಅವರನ್ನು ಶಾಸಕ ಸಿ.ಎನ್.ಬಾಲಕೃಷ್ಣ ಅಭಿನಂದಿಸಿದರು. ಗಂಗಾಧರ್‌ಗೌಡ, ದೀಪ, ಮಧುಕುಮಾರ್, ಪವಿತ್ರಾ, ಡಾ.ನಾಗೇಶ್, ಕೆ. ಎನ್. ಅನಿಲ್, ಇದ್ದರು.  
ಹಾಸನ

ವಿದ್ಯಾರ್ಥಿಗಳ ಬೆಳವಣಿಗೆಗೆ ಸಾಹಿತ್ಯ, ಕ್ರೀಡೆ ಅಗತ್ಯ

ನುಗ್ಗೇಹಳ್ಳಿ: ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪಠ್ಯಕ್ರಮ ಎಷ್ಟು ಮುಖ್ಯವೋ ಹಾಗೆಯೇ ಸಾಂಸ್ಕೃತಿಕ ಚಟುವಟಿಕೆ, ಸಾಹಿತ್ಯ, ಕ್ರೀಡೆಯೂ ಅತ್ಯಗತ್ಯ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಹೋಬಳಿಯ ಕೋಟೆಮನೆ ಇಂಟರ್‌ನ್ಯಾಷನಲ್ ಸ್ಕೂಲಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ 2025-26ನೇ ಸಾಲಿನ ಕಲೋತ್ಸವದಲ್ಲಿ ಮಾತನಾಡಿದರು.
ಪಠ್ಯ ಶಿಕ್ಷಣದೊಂದಿಗೆ ಶಿಸ್ತು ಸಂಯಮ, ಆತ್ಮವಿಶ್ವಾಸ ನಾಯಕತ್ವದ ಗುಣಗಳನ್ನು ಬೆಳೆಸುವ ಪ್ರಮುಖ ಪಾತ್ರ ವಹಿಸುವಲ್ಲಿ ಶಿಕ್ಷಕರು ಶ್ರಮ ವಹಿಸಬೇಕು ಎಂದರು.
ವಿಧಾನಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ಮಾತನಾಡಿ, ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮಾದರಿ ಶಾಲೆಯಾಗಿ ಕೋಟೆಮನೆ ಇಂಟರ್‌ನ್ಯಾಷನಲ್ ಸ್ಕೂಲ್ ಬೆಳೆಯುತ್ತಿದೆ ಎಂದರು.
ಪದ್ಮಶ್ರೀ ಪುರಸ್ಕೃತೆ ಡಾ.ಬಿ.ಮಂಜಮ್ಮ ಜೋಗತಿ ಮಾತನಾಡಿ, ಪಾಲಕರು ತಮ್ಮ ಮಕ್ಕಳು ಮೊಬೈಲ್ ಬಳಸುವ ಬಗ್ಗೆ ಎಚ್ಚರ ವಹಿಸಬೇಕು. ಬಿಡುವಿನ ವೇಳೆ ರಾಮಾಯಣ, ಮಹಾಭಾರತ ಕಥೆ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಬೇಕು. ತಂದೆ-ತಾಯಿ, ಗುರುಗಳು ಹೇಳಿದ ಮಾತನ್ನು ಪಾಲನೆ ಮಾಡುವ ಶಿಸ್ತು, ಸಂಯಮ ಕಲಿಸಬೇಕು. ಟಿವಿಯಲ್ಲಿ ಬರುವ ಧಾರಾವಾಹಿಗಳನ್ನು ಕಡಿಮೆ ನೋಡಿ, ಉಳಿದ ಸಮಯದಲ್ಲಿ ಮಕ್ಕಳೊಂದಿಗೆ ಸ್ವಲ್ಪ ಕಾಲ ಶಾಲೆಯ ಓದಿನ ಪಠ್ಯ ಪುಸ್ತಕಗಳ ಬಗ್ಗೆ ಗಮನಹರಿಸುವುದು ಸೂಕ್ತ ಎಂದು ಸಲಹೆ ನೀಡಿದರು.
ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಕೆ. ಎನ್.ಅನಿಲ್ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎನ್.ದೀಪಾ, ಆರೋಗ್ಯ ಅಧಿಕಾರಿ ಡಾ.ಎಚ್.ಬಿ.ನಾಗೇಶ್, ಕೋಟೆಮನೆ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಗಂಗಾಧರ್‌ಗೌಡ, ಕೋಟೆಮನೆ ಶಾಲೆಯ ಕಾರ್ಯದರ್ಶಿ ಎಚ್.ಜಿ.ಮಧುಕುಮಾರ್, ಮುಖ್ಯಶಿಕ್ಷಕಿ ಪವಿತ್ರಾ ಮಧುಕುಮಾರ್, ಶಿಕ್ಷಣ ಸಂಯೋಜಕ ಕರಿಯಪ್ಪ, ಸಿಆರ್‌ಪಿ ಮಂಜೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಆರ್. ದೊರೆಸ್ವಾಮಿ, ಕೃಷಿ ಪತ್ತಿನ ಮಾಜಿ ಅಧ್ಯಕ್ಷ ಸಂಪತ್ ಕುಮಾರ್, ಕೃಷಿ ಪತ್ತಿನ ನಿರ್ದೇಶಕ ಸೋಮನಹಳ್ಳಿ ತಿಮ್ಮೇಗೌಡ ಇದ್ದರು.