ಬಿಜೆಪಿ 12ನೇ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ನಿತಿನ್ ನಾಭಿ ಅವರಿಗೆ ಶುಭ ಕೋರಿ ಶಾಸಕ ಎಚ್.ಕೆ.ಸುರೇಶ್ ತಮ್ಮ ನಿವಾಸದಲ್ಲಿ ಕಾರ್ಯಕರ್ತರೊಂದಿಗೆ ಸಿಹಿ ಹಂಚಿ ಸಂಭ್ರಮಿಸಿದರು. 
ಹಾಸನ

ಬಿಜೆಪಿಯಿಂದ ಸಿಹಿ ಹಂಚಿ ಸಂಭ್ರಮಾಚರಣೆ

ಲೋಕೇಶ್ ಮನು. ಡಿ
ಬೇಲೂರು: ಭಾರತೀಯ ಜನತಾ ಪಾರ್ಟಿಯ 12ನೇ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ನಿತಿನ್ ನಾಭಿ ಅವರಿಗೆ ಶುಭ ಕೋರಿ ಬೇಲೂರಿನ ಶಾಸಕ ಎಚ್.ಕೆ.ಸುರೇಶ್ ಅವರ ನಿವಾಸದಲ್ಲಿ ಮಂಗಳವಾರ ಪಕ್ಷದ ಮುಖಂಡರು ಕಾರ್ಯಕರ್ತರೊಂದಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಭಾರತೀಯ ಜನತಾ ಪಾರ್ಟಿ ದೇಶದ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ರೂಪುಗೊಂಡಿದ್ದು, ನಮ್ಮ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿರುವ ನಿತಿನ್ ನಾಭಿ ಅವರು ಸಂಘಟನಾತ್ಮಕವಾಗಿ ಅಪಾರ ಅನುಭವ ಹೊಂದಿರುವಂತಹ ನಾಯಕರು. ಅವರ ಮಾರ್ಗದರ್ಶನದಲ್ಲಿ ಪಕ್ಷವು ರಾಷ್ಟ್ರ ಮಟ್ಟದಲ್ಲಿ ಮತ್ತಷ್ಟು ಬಲಿಷ್ಠವಾಗಿ ಬೆಳೆಯಲಿದೆ. ಜತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವ ಹಾಗೂ ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಜನ ಸಾಮಾನ್ಯರ ಬಳಿಗೆ ತಲುಪಿಸುವ ಹೊಣೆಗಾರಿಕೆ ಪ್ರತಿಯೊಬ್ಬ ಕಾರ್ಯಕರ್ತನ ಮೇಲಿದೆ. ಈ ನಿಟ್ಟಿನಲ್ಲಿ ನೂತನ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಾಭಿ ನೇತೃತ್ವದಲ್ಲಿ ಪಕ್ಷದ ಸಂಘಟನೆ ರಾಷ್ಟ್ರ ಭಕ್ತಿ ಹಾಗೂ ಜನ ಸೇವೆಯನ್ನು ಕೇಂದ್ರವಾಗಿಟ್ಟುಕೊಂಡು ಮುಂದಿನ ದಿನಗಳಲ್ಲಿ ಹೊಸ ಚೈತನ್ಯದಿಂದ ಕಾರ್ಯ ನಿರ್ವಹಿಸಲಿದ್ದಾರೆ. ಜತೆಗೆ ರಾಜ್ಯ ಹಾಗೂ ಕ್ಷೇತ್ರ ಮಟ್ಟದಲ್ಲಿ ಬಿಜೆಪಿ ಪಕ್ಷದ ಸಂಘಟನೆ ಇನ್ನಷ್ಟು ಗಟ್ಟಿಯಾಗುವಂತೆ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಬೂತ್‌ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಪಕ್ಷ ಬಲಪಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಸಂಜಯ್ ಕೌರಿ ಮಾತನಾಡಿ, ಭಾರತೀಯ ಜನತಾ ಪಾರ್ಟಿಯ 12ನೇ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಾಭಿ ಅವರ ಆಯ್ಕೆ ಪಕ್ಷಕ್ಕೆ ಹೊಸ ಶಕ್ತಿ ನೀಡಲಿದೆ. ಪಕ್ಷ ಸಂಘಟನೆಗೆ ಬಲ ತುಂಬುವಂತಹ ಇವರ ನಾಯಕತ್ವದಲ್ಲಿ ಪಕ್ಷ ಮುಂದಿನ ದಿನಗಳಲ್ಲಿ ಮತ್ತಷ್ಟು ಗಟ್ಟಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಎಚ್.ಎಂ.ದಯಾನಂದ್, ಮುಖಂಡರಾದ ರಂಗನಾಥ್, ಭರತ್, ನಗರಾಧ್ಯಕ್ಷ ವಿನಯ್ ಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಎಲ್.ರಾಘವೇಂದ್ರ, ಜಾವಗಲ್ ಪ್ರಸನ್ನ ಇತರರಿದ್ದರು.