ಹೋಬಳಿಯ ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಬೂಕನ ಬೆಟ್ಟಗ್ರಾಮದಲ್ಲಿ ಶ್ರೀರಂಗನಾಥ ಸ್ವಾಮಿಯ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿತು. 
ಹಾಸನ

ಶ್ರೀರಂಗನಾಥಸ್ವಾಮಿಯ ಬ್ರಹ್ಮರಥೋತ್ಸವ

ಲೋಕೇಶ್ ಮನು. ಡಿ
ಹಿರೀಸಾವೆ: ಹೋಬಳಿಯ ಪುರಾಣ ಪ್ರಸಿದ್ಧ ಶ್ರೀೀಕ್ಷೇತ್ರ ಬೂಕನಬೆಟ್ಟದಲ್ಲಿ ಶ್ರೀ ರಂಗನಾಥಸ್ವಾಮಿಯ 95ನೇ ವರ್ಷದ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಬೆಳಗ್ಗೆ ಬೆಟ್ಟದ ಮೇಲಿರುವ ಮೂಲ ವಿಗ್ರಹಕ್ಕೆ ಜಲಾಭಿಷೇಕ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಪುಷ್ಪಾರ್ಚನೆ ಮಾಡಲಾಯಿತು. ಇದಾದ ಬಳಿಕ ವಿವಿಧ ಪುಷ್ಪ ಹಾಗೂ ಆಭರಣಗಳಿಂದ ಅಲಂಕರಿಸಿ ಪೂಜಾ ಕೈಂಕರ್ಯ ನೆರವೇರಿಸಲಾಯಿತು.
ನಂತರ ರಂಗನಾಥಸ್ವಾಮಿ ಉತ್ಸವ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಮಂಗಳವಾದ್ಯದೊಂದಿಗೆ ಬೆಟ್ಟದ ಮೇಲಿಂದ ಉತ್ಸವದಲ್ಲಿ ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ಮಧ್ಯಾಹ್ನ 12.55 ಶುಭ ಮೇಷ ಲಗ್ನ ಮುಹೂರ್ತದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಬ್ರಹ್ಮರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಿದರು. ತಕ್ಷಣ ಸಹಸ್ರಾರು ಭಕ್ತರು ಗೋವಿಂದ ನಾಮಸ್ಮರಣೆಯೊಂದಿಗೆ ರಥ ಎಳೆದರು.
ನೆರೆದಿದ್ದ ಭಕ್ತರು ಗೋವಿಂದ ... ನಾಮಸ್ಮರಣೆಯೊಂದಿಗೆ ಭಕ್ತಿಭಾವದಲ್ಲಿ ತೇಲಿದರು. ರಥ ಸಾಗಿದಂತೆಲ್ಲ ಭಕ್ತರು ಬಾಳೆಹಣ್ಣು-ದವನ, ಹೂವು-ತುಳಸಿಪತ್ರೆ ರಥಕ್ಕೆ ಎಸೆದು, ಕರ್ಪೂರ ಬೆಳಗಿಸಿ ಹರಕೆ ಸಲ್ಲಿಸಿ ಪುನೀತರಾದರು.